ಉಪ್ಪಿನಂಗಡಿ,ಮಾ 03 (MSP): ಕ್ಷುಲಕ ಕಾರಣಕ್ಕೆ ಸಂಬಂಧಿಗಳಿಬ್ಬರ ನಡುವೆ ಇದ್ದ ಮನಸ್ತಾಪ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಾ.03 ರ ಭಾನುವಾರ ಬೆಳಗ್ಗೆ ಕೂಟೇಲು ಬಳಿ ನಡೆದಿದೆ. ಮೃತ ಯುವಕನನ್ನು ಕರಾಯ ಗ್ರಾಮದ ಕಲ್ಲಾಪು ಮನೆ ನಿವಾಸಿ ಮೋನಪ್ಪ ಎಂಬವರ ಪುತ್ರ ಯಶವಂತ (19) ಎಂದು ಗುರುತಿಸಲಾಗಿದೆ.
ಮೃತ ಯುವಕ ಯಶವಂತ ತನ್ನ ಚಿಕ್ಕಪ್ಪ ಹಾಗೂ ಇತರ ಸಂಬಂಧಿಗಳೊಂದಿಗೆ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಕಂಬಳ ನೋಡಲೆಂದು ಶನಿವಾರ ತೆರಳಿದ್ದಾರೆ. ಆದರೆ ಭಾನುವಾರ ಮುಂಜಾನೆ ಸುಮಾರು 5.30 ವೇಳೆಗೆ ಈತನ ಸಂಬಂಧಿ, ಕಾಡಬೆಟ್ಟು ನಿವಾಸಿಯಾದ ಆನಂದ ಎಂಬಾತ ಕಂಬಳದ ಗದ್ದೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯಶವಂತನಿಗೆ ಇರಿದಿದ್ದಾನೆ.
ಗಂಭೀರ ಗಾಯಗೊಂಡ ಯಶವಂತ ರಸ್ತೆ ಬಳಿ ಬಿದ್ದಿದ್ದು, ಇದನ್ನು ಗಮನಿಸಿದ ರಿಕ್ಷಾ ಚಾಲಕ ಫಾರೂಕ್ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರತಾಪ್ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಯಶವಂತ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.