ಮಂಗಳೂರು, ಮಾ 03(SM): ದೇಶದಲ್ಲಿ ಹಿಂದೂ ಹಾಗೂ ಇತರ ಧರ್ಮೀಯರಂತೆ ಮುಸ್ಲಿಮರು ಕೂಡಾ ಇದ್ದಾರೆ. ಅವರು ಯಾವಾಗಲೂ ದೇಶದ ಪರವಾಗಿಯೇ ಇರುತ್ತಾರೆ. ವಿರೋಧಿ ದೇಶದ ಪರವಾಗಿ ಅವರಿರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಭ್ರಮಾಚರಣೆ ವಿಚಾರದಲ್ಲಿ ಕೋಮುಸಂಘರ್ಷ ಸಾಧ್ಯತೆ ಬಗ್ಗೆ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಹೇಳಿಕೆ ನೀಡುವ ಮೂಲಕ ಭಾರತದ ಜನರ ಶಕ್ತಿಯನ್ನು ಕಡೆಗಣಿಸಲಾಗಿದೆ ಎಂದರು.
ಇನ್ನು ವಾಯುದಾಳಿಯಿಂದ ಬಿಜೆಪಿಗೆ ಲಾಭವಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ನೀಡಿರುವುದು ಅವರ ವೈಯುಕ್ತಿಕ ಹೇಳಿಕೆಯಾಗಿದೆ. ಯಡಿಯೂರಪ್ಪ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ದೇಶದ ವಿಚಾರವನ್ನು ಬಿಜೆಪಿಯ ಅಗ್ರಗಣ್ಯ ನಾಯಕರು ಮಾತನಾಡುತ್ತಾರೆ ಎನ್ನುವ ಮೂಲಕ ಯಡಿಯೂರಪ್ಪನವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇನ್ನು ಮುಂಬೈ ಅಟ್ಯಾಕ್ ಸಂಧರ್ಭ ಕಾಂಗ್ರೆಸ್ ಬೇಜವಾಬ್ದಾರಿಯಾಗಿ ನಡೆದುಕೊಂಡಿದೆ. ಈಗ ಮೋದಿ ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ನಾವು ಸೇನಾ ದಾಳಿಯ ರಾಜಕೀಯ ಲಾಭ ಪಡೆಯುತ್ತಿಲ್ಲ. ಕಾಂಗ್ರೆಸ್ ನ ಪ್ರಶ್ನೆಗೆ ಉತ್ತರವನ್ನು ಕೊಡುತ್ತಿದ್ದೇವೆ. ವಿಪಕ್ಷಗಳಿಗೆ ಹೇಗೆ ದಾಳಿಯಾಗಿದೆ ಅಂತಾ ಗೊತ್ತಿದೆ. ಆದರೂ ಕೂಡ ಕಾಂಗ್ರೆಸ್ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದೆ. ಈ ಹಿಂದೆ ಸೇನಾ ಸಾಮಾಗ್ರಿ ಖರೀದಿ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿತ್ತು. ವಿಪಕ್ಷಗಳು ಏರ್ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷ್ಯ ಕೇಳುತ್ತಿದೆ. ಸ್ವತಃ ಜೈಷ್ ಮಹಮ್ಮದ್ ಉಗ್ರ ಸಂಘಟನೆಯೇ ಒಪ್ಪಿಕೊಂಡಿದೆ. ಮಸೂರ್ ಅಜದ್ ಬಾಲ್ಕೋಟ್ ಧ್ವಂಸವಾಗಿದೆ ಎಂದು ಉಗ್ರ ಸಂಘಟನೆಯೇ ಒಪ್ಪಿಕೊಂಡಿದ್ದು, ಇದುವೇ ಸಾಕ್ಷಿಯಾಗಿದೆ ಎಂದಿದ್ದಾರೆ.