ಧರ್ಮಸ್ಥಳ ನ 1: ನಾಡಿನ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ನವೆಂಬರ್ 13ರಿಂದ 18ರ ವರೆಗೆ ನಡೆಯಲಿದ್ದು ಪೂರ್ವ ಸಿದ್ಧತೆಗಳ ಬಗ್ಗೆ ಸಮಾಲೋಚನಾ ಸಭೆ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ದ.ಕ. ಜಿಲ್ಲಾಉಸ್ತುವರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಧರ್ಮಸ್ಥಳಕ್ಕೆ ಮಂಗಳೂರು, ಪುತ್ತೂರು, ಪೆರಿಯಶಾಂತಿ, ಚಾರ್ಮಾಡಿ, ಪಟ್ಟಮೆ ಕಾರ್ಕಳ, ಬೆಳಾಲು, ನೆರಿಯಾ ಮೊದಲಾದ ಊರುಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆ.ಎಸ್.ಆರ್.ಟಿ.ಸಿ. ವತಿಯಿಂದ ರಾಜ್ಯದ ವಿವಿಧ ಭಾಗಗಳಿಂದ ವಿಶೇಷ ಬಸ್ ಸೌಲಭ್ಯ ಒದಗಿಸುವುದಾಗಿ ಅಧಿಕಾರಿಗಳು ತಿಳಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಶೀಘ್ರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಚಿವರು ಸಲಹೆ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲಕ್ಷ ದೀಪೋತ್ಸವದ ಮೊದಲ ಆಮಂತ್ರಣ ಪತ್ರವನ್ನು ಸಚಿವರಿಗೆ ನೀಡಿ ಸ್ವಾಗತಿಸಿದರು
ಇನ್ನು ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ ನಡೆಯವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನ ನ. 16 ಮತ್ತು 17 ರಂದು ನಡೆಯಲಿದೆ.