ಉಜಿರೆ, ಮಾ 03(SM): ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ಬೆಳ್ತಂಗಡಿಯ ಕಾಜೂರುದರ್ಗಾ ಶರೀಫ್ ಇದರ ಪಕ್ಕದಲ್ಲಿರುವ ಮದರಸದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮದರಸದಲ್ಲಿ ಸುಮಾರು ೨೦ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ರಾತ್ರಿ ನಡೆಸುತ್ತಿದ್ದ ಕಿತಾಪತಿಗಳ ಬಗ್ಗೆ ಮದರಸದಲ್ಲಿ ಒಬ್ಬರಿಗೊಬ್ಬರು ತಮಾಷೆ ಮಾಡಿದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿ ಕರಾಯದ ವಿದ್ಯಾರ್ಥಿಯೊಬ್ಬ ಸಾಗರದ ವಿದ್ಯಾರ್ಥಿಗೆ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಾಷೆ ಮಾಡಿದ್ದಕ್ಕೆ ಕೋಪಗೊಂಡು ಸಿಕ್ಕ ಸಿಕ್ಕ ವಸ್ತುಗಳಿಂದ ತಲೆಗೆ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ಮಾಡಿದ್ದ. ಗಾಯಾಳು ವಿದ್ಯಾರ್ಥಿಯನ್ನು ತಕ್ಷಣ ಗುರುಗಳು ಸೇರಿ ಉಜಿರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ರಕ್ತವಾಂತಿ ವಿಪರೀತವಾಗಿದ್ದರಿಂದ ಸ್ಕ್ಯಾನಿಂಗ್ ಮಾಡಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ, ಬಿದ್ದು ಗಾಯವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಆಡಳಿತಾಧಿಕಾರಿ ರಫೀಕ್ ಅವರು ಹಾಗೂ ಗುರುಗಳು ಸೇರಿ ಎರಡು ವಿದ್ಯಾರ್ಥಿಗಳ ಪೋಷಕರ ಜೊತೆ ರಾಜಿ ಸಂಧಾನ ನಡೆಸಿದ್ದಾರೆ.