ಮಂಗಳೂರು ನ 1: ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ನ.೧ರ ಬುಧವಾರ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಿತು. ಈ ಸಂದರ್ಭ ತುಳುನಾಡಿನ ಅಭಿವೃದ್ದಿ ಬಗ್ಗೆ ಹಾಗೂ ತುಳು ಭಾಷೆಯನ್ನು ೮ ನೇ ಪರಿಚ್ಚೇದಕ್ಕೆ ಸೇರ್ಪಡಿಸಲು ಒತ್ತಾಯಿಸಲಾಯಿತು. ತುಳುನಾಡು ರಕ್ಷಣಾ ವೇದಿಕೆಯ ಮುಖಂಡ ಯೋಗಿಶ್ ಶೆಟ್ಟಿ ಜಪ್ಪು ಧರಣಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನವೆಂಬರ್ ಒಂದು ತುಳುನಾಡಿಗೆ ಕರಾಳ ದಿನ, ಕಾರಣ ಆ ದಿನವೇ ತುಳುನಾಡು ಇಬ್ಬಾಗವಾಯಿತು. ಭಾಷಾವಾರು ಪ್ರಾಂತ್ಯದ ಸಂದರ್ಭದಲ್ಲಿ ತುಳುನಾಡಿನ ಒಂದು ಭಾಗ ಕರ್ನಾಟಕಕ್ಕೆ ಹಾಗೂ ಇನ್ನೊಂದು ಭಾಗ ಕೇರಳಕ್ಕೆ ಹಂಚಿ ಹೋಯಿತು. ನೈಸರ್ಗಿಕವಾಗಿ ಸಮೃದ್ದಿಯನ್ನು ಹೊಂದಿರುವ ಕರಾವಳಿಯ ಅಭಿವೃದ್ದಿ ಸರಕಾರೇತರ ಸಂಸ್ಥೆಗಳ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳ ಕೊಡುಗೆಯಾಗಿದೆ. ಇಲ್ಲಿ ಸರ್ಕಾರದ ಪಾತ್ರ ಇಲ್ಲಿ ನಗಣ್ಯ. ತುಳುನಾಡಿನಲ್ಲಿ ಸಿಗುವ ನೈಸರ್ಗಿಕ ಮರಳು ತುಳುನಾಡಿಗೆ ಸಿಗದೆ ಅನ್ಯ ರಾಜ್ಯದ ಪಾಲಾಗುತ್ತಿರುವುದು ಖಂಡನೀಯ ಎಂದರು.
ತುಳುನಾಡಿನ ಬಹುತೇಕರ ವ್ಯಾವ್ಯಹಾರಿಕ ಭಾಷೆ ತುಳುವಾಗಿದೆ.ಒಂದು ಕೋಟಿಗೂ ಅಧಿಕ ಜನ ತುಳುಭಾಷೆ ಮಾತಾನಾಡುತ್ತಿದ್ದರೂ ಈ ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ಸಿಗದಿರುವುದು ನೋವಿನ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು. ಹೀಗಾಗಿ ಶೀಘ್ರವೇ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು. ತುಳು ಸಿನಿಮಾ ಚೇಂಬರ್ ರಚನೆಯಾಗಬೇಕು,
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕು ಎನ್ನುವ ಮುಂತಾದ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಇದು ತುಳುವರ ಆಶಯವಾಗಿದೆ ಎಂದರು.