ಕುಂದಾಪುರ,ಮಾ 04(MSP): ಗುರುವಾರ ತಡ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ ಗುಲಾಬಿ ಪ್ರಕರಣಕ್ಕೆ ಸಂಬಂಧಿಸಿ ತಿರುವು ದೊರಕಿದೆ. ಸ್ಥಳೀಯ ಜನರ ಅಭಿಪ್ರಾಯವನ್ನು ಪುಷ್ಟೀಕರಿಸಿದ ಪೊಲೀಸರು ಮಣಿಪಾಲದಲ್ಲಿ ಗುಲಾಬಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕೊಲೆ ನಡೆದಿರುವ ಬಗ್ಗೆ ಪುರಾವೆಗಳು ದೊರಕಿವೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಉಡುಪಿ ಎಸ್ಪಿ ನಿಶಾ ಜೇಮ್ಸ್ ಕೊಲೆ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣಕ್ಕೆ ಪುಷ್ಟಿ ನೀಡಿದೆ.
ಫೆ.28ರ ಗುರುವಾರ ರಾತ್ರಿ ಮಲಗಿದ್ದ ಗುಲಾಬಿ ಶುಕ್ರವಾರ ಬೆಳಿಗ್ಗೆ ಮಲಗಿದ್ದ ಸ್ಥಿತಿಯಲ್ಲಿ ಹೆಣವಾಗಿದ್ದು, ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪ್ರತಿನಿತ್ಯವೂ ನಾಲ್ಕೂವರೆ ಪವನ್ ತೂಕದ ಚಿನ್ನದ ಸರ ಧರಿಸುತ್ತಿದ್ದವರ ಕುತ್ತಿಗೆಯಲ್ಲಿ ಸರ ಕಾಣೆಯಾಗಿದ್ದು ಹಾಗೂ ಮನೆಯೊಳಗೆ ಸಿಗರೇಟಿನ ಬೂದಿ ಬಿದ್ದಿರುವುದನ್ನು ಗಮನಿಸಿದ್ದ ಸ್ಥಳೀಯರು ಕೊಲೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ನಂತರ ಅನುಮಾನಾಸ್ಪದ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡ ಪೊಲಿಸರು ಗುಲಾಬಿ ದೇಹವನ್ನು ಪರೀಕ್ಷೆಗಾಗಿ ಮಣಿಪಾಲಕ್ಕೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಬಳಿ ಮೇಲ್ನೋಟಕ್ಕೆ ಕಾಣದ ಗುರುತುಗಳಿರುವುದು ಪತ್ತೆಯಾಗಿತ್ತು. ಗುಲಾಬಿ ಮನೆ ಸಮೀಪದಲ್ಲಿರುವ ’ವಿಜಯ ಗೇರು ಬೀಜ ಕಾರ್ಖಾನೆ’ಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಗುರುವಾರ ಸಂಜೆಯೇ ಹಾಳಾಗಿತ್ತು. ಇದರಿಂದಾಗಿ ಪೊಲೀಸರು ಪ್ರಕರಣವನ್ನು ಕೊಲೆ ಎಂಬುದಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದು, ಶಂಕಿತ ಎಂಟು ಜನರನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಐದು ತಂಡಗಳ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಎಸ್ಪಿ ಭೇಟಿ ಸಂದರ್ಭ ಕುಂದಾಪುರ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಜೊತೆಗಿದ್ದರು.
ವಿವಿಧ ಠಾಣೆಗಳಿಗೆ ಭೇಟಿ: ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ನಿಶಾ ಜೇಮ್ಸ್ ವಿವಿಧ ಠಾಣೆಗೆ ಭೇಟಿ ನೀಡಿ, ಮಾಹಿತಿ ಪಡೆದರು. ಕೊಲ್ಲೂರು, ಬೈಂದೂರು, ಗಂಗೊಳ್ಳಿ, ಕುಂದಾಪುರ ಠಾಣೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.