ಬೆಳ್ತಂಗಡಿ,ಮಾ 04(MSP): ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ನಿವಾಸಿ ಆಶೋಕ್ ಆಚಾರ್ಯ (31) ಎಂದು ಗುರುತಿಸಲಾಗಿದೆ.
ಆರೋಪಿಯೂ ವಿದ್ಯಾರ್ಥಿನಿಯ ಕುಟುಂಬದ ಜಾಗದ ದಾಖಲಾತಿಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿ, ಬಾಲಕಿಯ ಮನೆಯವರೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಂಡಿದ್ದ. ಇದೇ ಸಲಿಗೆಯಿಂದ ಕಾಲೇಜಿನ ರಜಾ ದಿನಗಳಲ್ಲಿ ಪರೀಕ್ಷೆಗಾಗಿ ಓದಿಕೊಳ್ಳಲು ತನ್ನ ಕಚೇರಿಗೆ ಬರುವಂತೆಯೂ, ತಾನು ಕಲಿಯಲು ನೆರವಾಗುವುದಾಗಿಯೂ ಹೇಳಿ ವಿದ್ಯಾರ್ಥಿನಿಗೆ ತನ್ನ ಕಚೇರಿಗೆ ಕರೆಸಿಕೊಂಡು ಅಲ್ಲಿ ಈತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ಆದರೆ ಇದನ್ನು ವಿರೋಧಿಸಿದ ವಿದ್ಯಾರ್ಥಿನಿಗೆ ಬೆದರಿಕೆ ಒಡ್ದಿದ್ದಾರೆ. ಘಟನೆ ನಡೆದು 6 ತಿಂಗಳ ಬಳಿಕ ವಿದ್ಯಾರ್ಥಿನಿಗೆ ರಿಕ್ಷಾವೊಂದರಲ್ಲಿ ಮತ್ತೆ ಲೈಂಗಿಕ ಕಿರುಕುಳ ನೀಡಿ ಮತ್ತೆ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾನೆ.
ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪೋಸ್ಕೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.