ಬ್ರಹ್ಮಾವರ,ಮಾ 04(MSP):ಕರಾವಳಿಯಲ್ಲಿ ಕಾಳುಮೆಣಸು ಉಪ ಬೆಳೆಯಾಗಿ ಬೆಳೆಯಲಾಗುತ್ತದೆ. ಅಡಿಕೆ, ತೆಂಗು ಹಾಗೂ ಇತರ ಮರಗಳಿಗೆ ಉಪ ಬೆಳೆಯಾಗಿ ಹಬ್ಬಿಸಲಾಗುತ್ತದೆ. ಆದರೆ ಬೇರೆ ಬೇರೆ ದೇಶಗಳಲ್ಲಿ ಕಾಳು ಮೆಣಸನ್ನು ಮುಖ್ಯ ಬೆಳೆಯಾಗಿ ಕೂಡಾ ಬೆಳೆಯಾಗುತ್ತಿದೆ. ಇತ್ತೀಚೆಗಿನ ಕೃಷಿ ಪ್ರಯೋಗಗಳಲ್ಲಿ ಕಾಳು ಮೆಣಸನ್ನು ಸಿಮೆಂಟ್ ಇತ್ಯಾದಿ ನಿರ್ಜಿವ ಕಂಬ ನಿಲ್ಲಿಸಿ ಅದಕ್ಕೆ ಹಬ್ಬಿಸುವ ವಿಧಾನ ನಿಧಾನವಾಗಿ ಚಾಲ್ತಿಗೆ ಬರುತ್ತಿದೆ. ಸಿಮೆಂಟ್ ಪೈಪ್ಗೆ ಕಾಳು ಮೆಣಸು ಹಬ್ಬಿಸುವ ವಿಧಾನಕ್ಕೆ ತುಸು ಮಾರ್ಪಾಟುಗಳನ್ನು ಮಾಡಿಕೊಂಡು ಇಸ್ರೇಲ್ ಮಾದರಿಯಲ್ಲಿ ಒಂದು ಎಕರೆ ಪ್ರದೇಶಕ್ಕೆ ಕಾಳು ಮೆಣಸು ಕೃಷಿ ಮಾಡುವ ಮೂಲಕ ಅಂಪಾರು ಗಣಪತಿ ವೈದ್ಯ ಕೃಷಿಯಲ್ಲಿ ಹೊಸ ಸಾಹಸ ಮೆರೆದಿದ್ದಾರೆ.
ಪ್ರತ್ಯೇಕವಾಗಿ ಕಾಳು ಮೆಣಸು ಕೃಷಿ ಮಾಡುವ ಯೋಚನೆ ಮಾಡಿದ ಅವರು ವಿಭಿನ್ನ ಮಾದರಿಯನ್ನು ಅನುಸರಿಸಿದ್ದಾರೆ. 10 ಅಡಿ ಎತ್ತರದ ಸಿಮೆಂಟ್ ಪೈಪ್ಗಳನ್ನು ಎಂಟು ಅಡಿಗೊಂದರಂತೆ ನೆಟ್ಟು ಅದಕ್ಕೆ ಸುತ್ತ ಒಂದು ಅಡಿ ವಿಸ್ತಿರ್ಣದಲ್ಲಿ ಕಬ್ಬಿಣದ ಜಾಲರಿಗಳನ್ನು ಅಳವಡಿಸಿ ಅದರೊಳಗೆ ತೆಂಗಿನ ಸಿಪ್ಪೆ (ಕತ್ತ)ವನ್ನು ಹುಡಿ ಮಾಡಿ ತುಂಬಿ, ಅದರೊಂದಿಗೆ ಟ್ರೈಕೋಡರ್ಮ ಮಿಶ್ರ ಮಾಡಿ ನೆಲದಲ್ಲಿ ಮೂರು ದಿಕ್ಕುಗಳಲ್ಲಿ ತಲಾ ಒಂದು ಕಸಿ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದರು. ಹತ್ತು ಅಡಿ ಎತ್ತರದಲ್ಲಿ ಬಟರ್ಪ್ಲೈ ಸ್ಪ್ರೀಂಕರ್ ಅಳವಡಿಕೆ ಮಾಡಿ ನೀರು ಹಾಯಿಸುತ್ತಾರೆ.
ಒಂದು ವರ್ಷದಲ್ಲಿ ಕಾಳು ಮೆಣಸಿನ ಬಳ್ಳಿಗಳು ಸಮೃದ್ಧವಾಗಿ ಹಬ್ಬಿವೆ. ಸಿಮೆಂಟ್ ಪೈಪ್ ಸುತ್ತ ತೆಂಗಿನ ಕಾಯಿ ಸಿಪ್ಪೆಯ ಹುಡಿ ಹಾಕಿರುವುದರಿಂದ ನೀರಿನ ತೇವಾಂಶ ಕಾಪಾಡುತ್ತದೆ. ಗಿಡಗಳು ಕೂಡಾ ಆರೋಗ್ಯಯುತವಾಗಿ ಬೆಳೆಯುತ್ತದೆ. ತುಂತುರು ನೀರನ್ನು ಮೇಲ್ಬಾಗದಲ್ಲಿ ನೀಡಿರುವುದರಿಂದ ಎಲೆಗಳ ಮೇಲೂ ನೀರು ಬಿದ್ದು ಗಿಡಗಳ ಬೆಳವಣಿಗೆಗೆ ಸಹಕಾರವಾಗುತ್ತದೆ. ಒಂದು ವರ್ಷ ಬಳ್ಳಿ ನಿರೀಕ್ಷೆಗೂ ಮೀರಿ ಹಬ್ಬಿವೆ. ಕೆಲವು ಬಳ್ಳಿಗಳು ಈಗಾಗಲೇ ಎಂಟು ಅಡಿ ತನಕ ಹಬ್ಬಿವೆ. ಹತ್ತು ಅಡಿ ತಲುಪಿದ ಕೂಡಲೇ ಮತ್ತೆ ಮೇಲೆ ಬೆಳೆಯದಂತೆ ಕತ್ತರಿಸಲಾಗುತ್ತದೆ. ಇದರಿಂದ ಕಾಳು ಮೆಣಸು ಕಟಾವು ಮಾಡಲು ಸುಲಭವಾಗುತ್ತದೆ.
ಗಣಪತಿ ವೈದ್ಯರು ಕರಿಯಮುಂಡ ತಳಿಯನ್ನು ಬಳಕೆ ಮಾಡಿದ್ದಾರೆ. ಸುಮಾರು 500 ಗಿಡಗಳನ್ನು ನಾಟಿ ಮಾಡಿದ್ದಾರೆ. ಆದರೆ ಸೊರಗು ರೋಗ ತಗುಲಿದೆ. ಸೊರಗು ರೋಗದಿಂದ ಸಾಕಷ್ಟು ಗಿಡಗಳು ನಾಶವಾಗಿವೆ. ಸೂಕ್ತ ಸಸ್ಯ ಸಂರಕ್ಷಣ ವಿಧಾನಗಳ ಅನುಸರಿಸಿ, ರೋಗ ಬಾಧೆ ಹತೋಟಿಗೆ ಬಂದಿದೆ.
ಮರಕ್ಕೆ ಹಬ್ಬಿಸಿ ಬೆಳೆಸುವುದಕ್ಕೂ, ನೇರವಾಗಿ ಇಂಥಹ ಮಾದರಿಗಳ ಮೂಲಕ ಏಕ ಬೆಳೆಯಾಗಿ ಕಾಳು ಮೆಣಸನ್ನು ಬೆಳೆಯುವುದಕ್ಕೂ ವ್ಯತ್ಯಾಸಗಳಿವೆ. ಒಂದು ಕಂಬದಿಂದ ಕನಿಷ್ಠ ಐದು ಕೆ.ಜಿ ಕಾಳು ಮೆಣಸು ದೊರೆತರೂ ಕೂಡಾ ಇವತ್ತಿನ 300ರೂಪಾಯಿ ಧಾರಣೆಗೆ ಹೋಲಿಸಿದರೆ ಲಾಭ ಕಷ್ಟ ಸಾಧ್ದ. ನಿರ್ವಹಣಾ ವೆಚ್ಚ, ಗೊಬ್ಬರ, ನೀರು, ಸಸ್ಯ ಸಂರಕ್ಷಣಾ ವೆಚ್ಚ ಕಾಳು ಮೆಣಸಿಗೋಸ್ಕರವೇ ತಗಲುವುದರಿಂದ ಖರ್ಚು ಕೂಡಾ ತುಂಬಾ ಬರುತ್ತದೆ. ಇಂಥಹ ಪ್ರಯೋಗಳನ್ನು ಮಾಡಲು ಕೂಡಾ ಹಣವೂ ಸಾಕಷ್ಟು ಬೇಕಾಗುತ್ತದೆ. ಆದರೆ ಪ್ರಯೋಗಶೀಲವಾಗಿ ಮಾಡುವಾಗ ಮನಸ್ಸಿಗೆ ಖುಷಿ ಕೊಡುತ್ತದೆ. ಇಂಥಹ ಪ್ರಯೋಗಳು ಕೃಷಿ ಕ್ಷೇತ್ರವನ್ನು ಎತ್ತರಕ್ಕೇರಿಸುತ್ತದೆ. ಇಸ್ರೆಲ್ನಂತಹ ದೇಶದಲ್ಲಿ ಮಾಡುವ ಕೃಷಿ, ಅಲ್ಲಿನ ತಾಂತ್ರಿಕತೆಯನ್ನು ಇಲ್ಲಿಯೂ ಬಳಕೆ ಮಾಡುವ ಸಾಹಸ ತೋರುತ್ತಿರುವುದು ಶ್ಲಾಘನಾರ್ಹ.
ಇವತ್ತಿನ ಕಾಳು ಮೆಣಸು ಧಾರಣೆಗೆ ಹೋಲಿಸಿದರೆ ಕಾಳು ಮೆಣಸನ್ನು ಮುಖ್ಯ ಬೆಳೆಯಾಗಿ ಬೆಳೆದರೆ ಲಾಭ ಸಾಧ್ಯವೇ ಎನ್ನುವ ಪ್ರಶ್ನೆಗಳು ಎದುರಾಗುತ್ತದೆ. ಗಣಪತಿ ವೈದ್ಯರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವ ಆಸಕ್ತರು. ಕೃಷಿಯಲ್ಲಿ ಏನಾದರೂ ಮಾಡಬೇಕು ಎನ್ನುವ ತುಡಿತ ಹೊಂದಿರುವವರು. ಧಾರ್ಮಿಕವಾಗಿಯೂ ಗುರುತಿಸಿಕೊಂಡಿರುವ ಇವರು ಕೃಷಿಯ ಬಗ್ಗೆ ಅಗಾಧವಾದ ಆಸಕ್ತಿ ಹೊಂದಿದ್ದಾರೆ.