ಮಂಗಳೂರು,ಮಾ 04(MSP): ಬಹು ಅಂಗಾಂಗ ವೈಫಲ್ಯದ ತೊಂದರೆಯಿಂದ, ಕೋಮಾ ಸ್ಥಿತಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ ಕುಮಾರ್ (67) ವಿಧಿವಶರಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ತೀರಾ ಬಿಗಡಾಯಿಸಿತ್ತು. ಕಳೆದ ಐದು -ಆರು ತಿಂಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾ.4 ರ ಸೋಮವಾರ ಮಧ್ಯಾಹ್ನ 1.30 ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ವಿ.ಧನಂಜಯ ಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ. ಬಿಜೆಪಿಯಲ್ಲಿ ರಾಜಕೀಯ ಜೀವನ ಆರಂಭಿಸಿದ ಧನಂಜಯ್ ಕುಮಾರ್, ಶಾಸಕರಾಗಿ, ಸಂಸದರಾಗಿ, ಆಯ್ಕೆಯಾಗಿದ್ದರು, ಕೇಂದ್ರ ಸರ್ಕಾರದಲ್ಲೂ ಸಚಿವರಾಗಿಯೂ ಕೆಲಸ ಮಾಡಿದ್ದರು.
ವೇಣೂರಿನ ಜೈನ ಮನೆತನದಲ್ಲಿ ಜನಿಸಿದ ಧನಂಜಯ್ ಕುಮಾರ್ ಉಡುಪಿ ವೈಕುಂಠ ಬಾಳಿಗ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ ವೃತ್ತಿ ಅರಂಭಿಸಿದರು. ಆ ನಂತರ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು.ಬಳಿಕ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ, ಯುವಮೋರ್ಚಾದ ರಾಜ್ಯಾಧ್ಯಕ್ಷ , ಅಖಿಲ ಭಾರತ ಉಪಾಧ್ಯಕ್ಷ ಸಹಿತ ಹಲವು ಹುದ್ದೆಗಳನ್ನು ನಿರ್ವಹಿಸಿದರು.
ಮಾ.5 ರಂದು ಬೆಳಗ್ಗೆ 7 ಗಂಟೆಯಿಂದ 10 ರವರೆಗೆ ಮಂಗಳೂರಿನ ಕದ್ರಿ ಕಂಬಳದಲ್ಲಿ ಇರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ವೇಣೂರಿಗೆ ಅವರ ಮೃತದೇಹ ಕೊಂಡೊಯ್ದು ಅಂತಿಮವಿಧಿವಿಧಾನ ನೆರವೇರಲಿದೆ.