ಕುಂದಾಪುರ ನ 1 : ಭಾಷಾವಾರು ಪ್ರಾಂತ್ಯಗಳ ರಚನೆಯಾದ ಸಂದರ್ಭದಲ್ಲಿ ಕನ್ನಡದ ಮಕ್ಕಳೆಲ್ಲ ಒಂದಾಗಿರಲು ಸಾಧ್ಯವಾಗಿರಲಿಲ್ಲ. 1973 ರಲ್ಲಿ ಡಿ.ದೇವರಾಜ್ ಅರಸುರವರ ಇಚ್ಚಾ ಶಕ್ತಿಯಿಂದ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಭಾವಾಭೀಮಾನದ ದಿನ ಇದಾಗಿದೆ ಎಂದು ಕುಂದಾಪುರದ ಕಂದಾಯ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ನಡೆದ 62ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಅವರು ರಾಜ್ಯೋತ್ಸವದ ಸಂದೇಶ ನೀಡಿದರು. ಆಲೂರು ವೆಂಕಟರಾಯ, ಬಳ್ಳಾರಿಯ ರಂಜ್ಮಾನ್ ಸಾಹೇಬ್, ಕಾರ್ನಾಡು ಸದಾಶಿವ ರಾವ್, ಡಾ.ಶಿವರಾಮ ಕಾರಂತ. ಬಿ.ಪಿ.ಕಪಿಲರಾಯ, ಮಂಜೇಶ್ವರ ಗೋವಿಂದ ಪೈ ಮೊದಲಾದ ಹಿರಿಕರ ತ್ಯಾಗ ಫಲದಿಂದ ಅಖಂಡ ಕರ್ನಾಟಕ ನಿರ್ಮಾಣ ಆಗಿದೆ. ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದೇಶದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಕರ್ನಾಟಕದ ಏಕೀಕರಣದ ಹೆಸರಿನಲ್ಲಿ ಕನ್ನಡಿಗರು ಮಾತೃ ಭಾಷೆಯ ಕುರಿತಾದ ಸ್ವಾಭಿಮಾನ ಮೆರೆದಿದ್ದಾರೆ. ಕವಿರಾಜ್ ಮಾರ್ಗದಿಂದ ಆರಂಭವಾಗಿ ಇಂದಿನವರೆಗೂ ಅನೇಕ ಸಾಹಿತ್ಯ ಕೃತಿಗಳು ಕನ್ನಡದಿಂದ ಹೊರ ಹೊಮ್ಮಿದೆ. ೮ ಜ್ಞಾನಪೀಠವನ್ನು ಪಡೆದುಕೊಂಡಿರುವ ಕನ್ನಡ ಭಾಷೆಗೆ ಬಹು ದೊಡ್ಡ ಶ್ರೀಮಂತಿಕೆ ಇದೆ. ಬೇಲೂರು, ಹಳೇಬಿಡು ಮುಂತಾದ ಸ್ಥಳಗಳ ನಮ್ಮ ಶಿಲ್ಪಕಲೆಯ ರಾಯಭಾರಿಯಂತಿದೆ. ಇಂಗ್ಲೀಷ್ನ ಭೃಮೆಯಿಂದಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಹೊಣೆ ಎಲ್ಲರ ಮೇಲೂ ಇದೆ. ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸುವುದು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯವಾಗಿದೆ. ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಾಡಿನ ನೆಲ, ಜಲ, ಸಂಸ್ಕೃತಿಯ ಹಾಗೂ ಕನ್ನಡಿಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ಡಿವೈಎಸ್ಪಿ ಪ್ರವೀಣ್ ಎಚ್ ನಾಯಕ್, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ.ನಾಗಭೂಷಣ ಉಡುಪ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ಅವರ ನೇತ್ರತ್ವದಲ್ಲಿ ಪೊಲೀಸ್, ಎನ್ಸಿಸಿ, ಸ್ಕೌಟ್ಸ್ ಹಾಗೂ ಭಾರತ್ ಸೇವಾದಳದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ನಗರ ವ್ಯಾಪ್ತಿಯ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.