ಮಂಗಳೂರು, ಮಾ 05(MSP): ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಮುದೆಯಲ್ಲಿ ಫೆಬ್ರುವರಿ 28ರಂದು ಮಹಿಳೆಯೊಬ್ಬರ ಕೊಲೆಗೆ ಪ್ರಯತ್ನಿಸಿ, ಆಕೆಯ ಮೊಬೈಲ್ ಮತ್ತು ನಗದು ಸುಲಿಗೆ ಮಾಡಿಕೊಂಡು ಪರಾ ರಿಯಾಗಿದ್ದ ಆರೋಪಿಯನ್ನು ಪೊಲೀಸರು ಮಾ.3 ರ ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತೆಂಕ ಎಕ್ಕಾರು ಗ್ರಾಮದ ಸುನೀಲ್ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ತನುಜಾ ಎಂಬುವವರು ಫೆ.28ರಂದು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಯು ದೊಣ್ಣೆಯಿಂದ ತಲೆಗೆ ಹೊಡೆದಿದ್ದ. ಪ್ರಜ್ಞಾಶೂನ್ಯರಾಗಿ ಬಿದ್ದಿದ್ದ ತನುಜಾ ಅವರ ಮೊಬೈಲ್ ಮತ್ತು ಅವರಲ್ಲಿದ್ದ 1,000 ನಗದು ಸುಲಿಗೆ ಮಾಡಿ ಪರಾರಿಯಾಗಿದ್ದ.
ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಂಪದವು ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಯಕ್ಷಗಾನ ನಡೆಯುತ್ತಿದ್ದ ಸ್ಥಳಕ್ಕೆ ಭಾನುವಾರ ಬೆಳಗ್ಗಿನ ಜಾವ 2.30ರ ಸುಮಾರಿಗೆ ಸುನೀಲ್ ಬಂದಿದ್ದ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬಜ್ಪೆ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಜ್ಪೆ ಠಾಣೆ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಸಬ್ ಇನ್ಸ್ಪೆಕ್ಟರ್ ಶಂಕರ ನಾಯರಿ, ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ರಾಮಚಂದ್ರ, ದೇವು ಶೆಟ್ಟಿ, ಪೂವಪ್ಪ, ಕಾನ್ಸ್ಟೆಬಲ್ಗಳಾದ ಚಂದ್ರಮೋಹನ್, ಪ್ರೇಮಾನಂದ, ಭರತ್, ಶಶಿಧರ, ಲಮಾಣಿ ಮತ್ತು ಗೃಹರಕ್ಷಕ ಮೆಲ್ವಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.