ಮಂಗಳೂರು, ಮಾ 05(MSP): ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಒಟ್ಟು 19.14 ಲಕ್ಷ ರೂ.ಮೌಲ್ಯದ 579.98 ಗ್ರಾಂ ಚಿನ್ನ ಹಾಗೂ 18.10 ಲಕ್ಷ ರೂ ವಿದೇಶಿ ಕರೆನ್ಸಿ ವಶಪಡಿಸಿಕೊಂಡು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕಸ್ಟಮ್ಸ್ ನ ಏರ್ ಇಂಟೆಲಿಜೆನ್ಸ್ ವಿಭಾಗದವರು ಕಾರ್ಯಾಚರಣೆ ನಡೆಸಿ, ದುಬೈಗೆ ಹೊರಟಿದ್ದ ಪ್ರಯಾಣಿಕನಿಂದ ವಿದೇಶಿ ಕರೆನ್ಸಿ ವಶಪಡಿಸಿಕೊಂಡರು. ಯುಎಸ್ ಡಾಲರ್, ಯೂರೋ, ಓಮಾನಿ ರಿಯಾಲ್ಸ್ ಹಾಗೂ ಕುವೈಟ್ ದಿನಾರ್ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಕಸ್ಟಮ್ಸ್ ತಂಡ ವಶಕ್ಕೆ ತೆಗೆದುಕೊಂಡಿದೆ. ಒಟ್ಟು 18.10 ಲಕ್ಷ ರೂ. ಮೌಲ್ಯದ ಈ ವಿದೇಶಿ ನೋಟುಗಳನು ಲಗೇಜ್ ಬ್ಯಾಗ್ ನಲ್ಲಿ ಬಟ್ಟೆ ನಡುವೆ ಅಡಗಿಸಿ ಇರಿಸಲಾಗಿತ್ತು.
ಮೊದಲ ಪ್ರಕರಣದಲ್ಲಿ ವಿದೇಶಿ ಮೂಲದ 24 ಕ್ಯಾರೆಟ್ ನ 232.62 ಗ್ರಾಂ(7.68 ಲಕ್ಷ ಮೌಲ್ಯ) ಚಿನ್ನವನ್ನು ಬೆಳ್ಳಿ ಲೇಪಿತ ವೃತ್ತಾಕಾರದ ಪ್ಲೇಟ್ ನಲ್ಲಿ ಅಡಗಿಸಿ ಟ್ರಾವೆಲ್ ಕುಕ್ಕರ್ ಒಳಗೆ ಹುದುಗಿಸಿ ಇರಿಸಲಾಗಿತ್ತು. ಪ್ರಯಾಣಿಕ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಬರುತ್ತಿದ್ದ ಮಾಹಿತಿ ಮೇರೆಗೆ ಆತನನ್ನು ತಪಾಸಣೆಗೊಳಪಡಿಸಿದಾಗ ಪತ್ತೆಯಾಗಿದೆ.
ಎರಡನೇ ಪ್ರಕರಣದಲ್ಲಿ 24 ಕ್ಯಾರೆಟ್ ನ ವಿದೇಶಿ ಮೂಲದ ಹುಡಿ ರೂಪದ 317.360 ಗ್ರಾಂ(11.46 ಲಕ್ಷ ರೂ.ಮೌಲ್ಯ) ಚಿನ್ನವನ್ನು ಪ್ರಯಾಣಿಕ ಗುದದ್ವಾರದೊಳಗೆ ಇಟ್ಟುಕೊಂಡು ಸಾಗಣೆ ಮಾಡುತ್ತಿದ್ದಾಗ ಪತ್ತೆ ಮಾಡಲಾಗಿದೆ. ದುಬೈನಿಂದ ಬಂದ ಆರೋಪಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿ ಬಂಧಿಸಲಾಯಿತು.