ಕಾಪು ನ 1: ಪುರಸಭೆ ಎಂಜಿನಿಯರ್ ಹಾಗೂ ಮುಖ್ಯಾಧಿಕಾರಿ ಶಾಸಕರೆದುರೇ ಮಾತಿನ ಚಕಮಕಿ ನಡೆಸಿ ಎಂಜಿನಿಯರ್ ಕಣ್ಣೀರಿಟ್ಟ ಘಟನೆ ಮಂಗಳವಾರ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪುರಸಭೆ ವ್ಯಾಪ್ತಿಯಲ್ಲಿ 29 ಕಾಮಗಾರಿಗಳನ್ನು ಒಬ್ಬರೇ ಗುತ್ತಿಗೆದಾರರು ವಹಿಸಿಕೊಂಡಿದ್ದು, ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸದಸ್ಯರ ಮಾತಿಗೂ ಬೆಲೆ ನೀಡುತ್ತಿಲ್ಲ. ಕಾಮಗಾರಿಗಳನ್ನು ಪ್ರತ್ಯೇಕವಾಗಿ ನೀಡಬೇಕಿತ್ತು ಎಂದು ಸದಸ್ಯರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದರಿಂದ ಕೆರಳಿದ ಮುಖ್ಯಾಧಿಕಾರಿ ರಾಯಪ್ಪ ಎಂಜಿನಿಯರ್ ಪ್ರತಿಮಾ ಅವರಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದರು. ಗುತ್ತಿಗೆದಾರರು ಬಿಲ್ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ಮಾತನ್ನು ಕೇಳುತ್ತಿಲ್ಲ ಎಂದರು. ಗುತ್ತಿಗೆದಾರರರು ಕಚೇರಿಗೆ ಬಂದಾಗ ನೀವೇ ಬಿಲ್ ಪಾವತಿಸುವಂತೆ ಸೂಚಿಸಿದಿರಿ ಎಂದು ಪ್ರತಿಮಾ ಮಾರುತ್ತರ ನೀಡಿದರು. ಇದರಿಂದ ಸಿಟ್ಟಿಗೆದ್ದ ರಾಯಪ್ಪ, ನಾನೇನು ಹೇಳಿಲ್ಲ. ನನ್ನನ್ನು ವಿನಾಕಾರಣ ಎಳೆದು ತರಬೇಡಿ. ಗುತ್ತಿಗೆದಾರರು ಕಾಮಗಾರಿ ನಿರ್ವಹಿಸದಿದ್ದರೆ ನೋಟಿಸ್ ನೀಡದೆ ನೀವೇಕೆ ಸುಮ್ಮನಿದ್ದೀರಿ ಎಂದರು. ಈ ಸಮಯದಲ್ಲಿ ಮಧ್ಯಪ್ರವೇಶಿಸಿ ಸರಿಯಾಗಿ ಕಾಮಗಾರಿ ನಿರ್ವಹಿಸದ ಗುತ್ತಿಗೆದಾದರರ ಗುತ್ತಿಗೆಯನ್ನು ರದ್ದುಗೊಳಿಸಿ ಮತ್ತು ಕಪ್ಪುಪಟ್ಟಿಗೆ ಸೇರಿಸಿ ಎಂದು ಶಾಸಕ ವಿನಯಕುಮಾರ್ ಸೊರಕೆ ವಿಷಯಕ್ಕೆ ತೆರೆ ಎಳೆದರು.
ಸಿಡಿಪಿ ಆಗದೇ ನಗರ ಯೋಜನ ಪ್ರಾಧಿಕಾರದಿಂದ ಪುರಸಭೆ ವ್ಯಾಪ್ತಿಯಲ್ಲಿ ತೊಂದರೆಗಳಾಗುತ್ತಿದೆ ಎಂದು ಸದಸ್ಯ ಅರುಣ್ ಶೆಟ್ಟಿ ಪಾದೂರು ಸಭೆಯ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಶಾಸಕರು, ಕಾಪು ಪುರಸಭೆ ವ್ಯಾಪ್ತಿಯಲ್ಲಿ ಇನ್ನೂ ಸಿಡಿಪಿ ಆಗಿಲ್ಲ. ಪ್ರಾಧಿಕಾರದಿಂದ ಮಾಸ್ಟರ್ ಪ್ಲಾನ್ ಮಾಡುವಾಗ ಡೀಮ್ಡ್ ಆಗಿ ಪಟ್ಟಿ ತಯಾರಿಸಿ, ವಿನಾಯಿತಿ ನೀಡಲು ಸಂಬಂದಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ. ಇಲಾಖೆ ಕಾರ್ಯದರ್ಶಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಉಪಸ್ಥಿತರಿದ್ದರು