ಮಂಗಳೂರು,ಮಾ.05(AZM):ಯಾವುದೇ ಸರಕಾರಿ ಕಾರ್ಯಕ್ರಮಗಳನ್ನು ಮಾಡುವಾಗ ಗೌರವಪೂರ್ವಕವಾಗಿ ಹೂ ಹಾರ, ಹೂಗುಚ್ಚ ಸ್ಮರಣಿಕೆಯನ್ನು ನೀಡುವ ಬದಲು ನೋಟ್ ಬುಕ್ ಗಳನ್ನು ಕೊಟ್ಟರೆ ಎಷ್ಟೋ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ವೈ ಶೆಟ್ಟಿ ಹೇಳಿದ್ದಾರೆ.
ಸಾಗರಮಾಲಾ ಯೋಜನೆಯಡಿ ಕುಳಾಯಿಯಲ್ಲಿ ನಿರ್ಮಾಣವಾಗಲಿರುವ ಮೀನುಗಾರಿಕಾ ಬಂದರು ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಈ ಕುರಿತು ಅವರು ಮಾತನಾಡಿದರು. ಪ್ರತಿಯೊಂದು ಸರಕಾರಿ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಎಷ್ಟೋ ಹಣ ವೆಚ್ಚಮಾಡಿ ಹೂಗುಚ್ಚಗಳನ್ನು ಕೊಟ್ಟು ಸನ್ಮಾನಿಸುತ್ತಾರೆ. ಆದರೆ ಆ ಹೂಗುಚ್ಚಗಳು ಕೊನೆಗೂ ಹೋಗುವುದು ಕಸದ ಬುಟ್ಟಿಗೆ. ಇದಕ್ಕಿಂತ ಪುಸ್ತಕಗಳನ್ನು ಕೊಟ್ಟು ಸನ್ಮಾನಿಸುವುದರಿಂದ, ಆ ಪುಸ್ತಕಗಳನ್ನು ಒಟ್ಟುಗೊಳಿಸಿ, ಬಡ ವಿದ್ಯಾರ್ಥಿಗಳಿಗೆ ದಾನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಒಂದು ಕಾರ್ಯಕ್ರಮದಲ್ಲಿ 3 ಪುಸ್ತಕಗಳು ಸಿಕ್ಕಿದರೂ, ಒಂದು ತಿಂಗಳಲ್ಲಿ 10 ಕಾರ್ಯಕ್ರಮದಲ್ಲಿ ಭಾಗವಹಿಸಿದರೆ 30 ಪುಸ್ತಕಗಳು ದೊರಕುತ್ತದೆ. ಈ ಪುಸ್ತಕಗಳು ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದರು.
ಇದೇ ಮೊದಲ ಬಾರಿ ಕಾರ್ಯಕ್ರಮದಲ್ಲಿ ಶಾಸಕ ಭರತ್ ವೈ ಶೆಟ್ಟಿಯವರು ಪುಸ್ತಕಗಳನ್ನು ಸನ್ಮಾನವಾಗಿ ಪಡೆದು ಕೊಂಡರು. ಕಾರ್ಯಕ್ರಮಕ್ಕೂ ಮೊದಲು, ತನಗೆ ಹೂಗುಚ್ಚವಾದರೆ ಸನ್ಮಾನಿಸಬೇಡಿ. ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಎಂಬ ಮಾಹಿತಿಯನ್ನು ಫೋನ್ ಮುಖಾಂತರ ನೀಡಿದ್ದರು. ಈ ಹಿನ್ನಲೆ ಇಂದು ಕಾರ್ಯಕ್ರಮದಲ್ಲಿ ಅವರಿಗೆ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.
ಇನ್ನು ಮುಂದುವರಿದ ಕಾರ್ಯಕ್ರಮದಲ್ಲೂ ಅತಿಥಿಗಳಿಗೆ ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.