ಮಂಗಳೂರು,ಮಾ.05(AZM):ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ ಗೆಲುವಿನ ಗಿರಿಯೇರಿದ ಕಲಾವಿದರಾದ ಜಲವಳ್ಳಿ ವೆಂಕಟೇಶ್ ರಾವ್ ಅವರು ವಯೋಸಹಜ ಕಾಯಿಲೆಯಿಂದ ಇಂದು ನಿಧನರಾಗಿದ್ದಾರೆ.
ಜಲವಳ್ಳಿ ವೆಂಕಟೇಶ್ ರಾವ್ ಅವರು ತಮ್ಮ ಪತ್ನಿ ಕಲ್ಯಾಣಿ ಹಾಗೂ ಮಕ್ಕಳಾದ ಮಾರುತಿ,ಮಂಜುನಾಥ,ವಿದ್ಯಾಧರ ಎಂಬವರನ್ನು ಅಗಲಿದ್ದಾರೆ. ಇವರು ಹೊನ್ನಾವರ ತಾಲೂಕಿನ ಜಲವಳ್ಳಿ ಎಂಬ ಹಳ್ಳಿಯಲ್ಲಿ 1933 ನವೆಂಬರ್ 1ರಂದು ಹುಟ್ಟಿದರು. ಕಡುಬಡತನದ ಹಿನ್ನಲೆ ಎರಡನೇ ಇಯತ್ತೆಗೆ ಶಿಕ್ಷಣ ಮೊಟಕುಗೊಳಿಸಿ ತನ್ನ 16ನೇ ವಯಸ್ಸಿನಲ್ಲೇ ಕಲಾಲೋಕಕ್ಕೆ ಹೆಜ್ಜೆ ಹಾಕಿದರು. ಆರಂಭದಲ್ಲಿ ಸ್ತ್ರೀಪಾತ್ರಗಳನ್ನೂ ಇವರು ನಿರ್ವಹಿಸುತ್ತಿದ್ದರು. ಶನೀಶ್ವರ ಮಹಾತ್ಮೆಯ ಶನೀಶ್ವರನ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದಿತ್ತು.
ವೆಂಕಟೇಶ್ ರಾವ್ ಅವರ ಮೇರು ಪ್ರತಿಭೆಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರಕಿದ್ದು, ಬ್ರಹ್ಮಾವರದಲ್ಲಿ ಅಭಿಮಾನಿ ಬಳಗದಿಂದ ಗೌರವ ಅಭಿನಂದನೆಯೂ ನಡೆದಿತ್ತು.