ಬಂಟ್ವಾಳ,ಮಾ.06(AZM):ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕರಿಗೆ ಹಣವನ್ನು ಹಂಚುವ ಉದ್ದೇಶದಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೆಲವು ರಾಜಕೀಯ ನಾಯಕರು, ಅಡಗಿಸಿಟ್ಟಿದ್ದ ಸುಮಾರು 62 ಲಕ್ಷ ರೂ. ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು 2018ನೇ ಸಾಲಿನ ಚುನಾವಣೆ ಮುಂಚಿತವಾಗಿಯೇ ವಶಪಡಿಸಿಕೊಂಡಿದ್ದರು. ಇದೀಗ ಬಂಟ್ವಾಳ ತಹಶೀಲ್ದಾರರು ಬಂಟ್ವಾಳ ನಗರ ಠಾಣೆಯಲ್ಲಿ ಕಾನೂನು ವಿರುದ್ಧ ವ್ಯವಹಾರ ನಡೆಸಿರುವ ರಾಜಕೀಯ ನಾಯಕರ ವಿರುದ್ಧ ದೂರು ಸಲ್ಲಿಸಿದ್ದಾರೆ.
2018 ನೇ ಸಾಲಿನ ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಆಧಿಕಾರಿಗಳು ಸುಧಾಕರ ಶೆಟ್ಟಿ ರವರ ಕಛೇರಿ ಮೇಲೆ ದಾಳಿ ನಡೆಸಿ ರೂ. 22 ಲಕ್ಷ ಹಾಗೂ ಬಿ.ಸಿ ರೋಡ್ನ ಶ್ರೀನಿವಾಸ್ ಲಾಡ್ಜ್ ಮೇಲೆ ದಾಳಿ ಮಾಡಿ ಡೆನ್ಸಿಲ್ ಹರ್ಮನ್ ಎಂಬವರಿಂದ ರೂ. 40 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದು, ಒಟ್ಟು ರೂ. 62,ಲಕ್ಷ ಹಣವನ್ನು ಸ್ವಾಧೀನಪಡಿಸಿಕೊಂಡು ವಿಚಾರಣೆ ನಡೆಸಿದ್ದ್ರರು.
2018 ನೇ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಸಾರ್ವಜನಿಕರಿಗೆ ಹಣವನ್ನು ಹಂಚುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ಕಾಂಟ್ರಾಕ್ಟರ್ ಸುಧಾಕರ ಶೆಟ್ಟಿ,ಎಮ್.ಎಸ್ ನಿರ್ಮಾಣ್ ಕನ್ಸ್ಟ್ರಕ್ಷನ್ ನ ಉದಯ ಹೆಗ್ಡೆ, ಸುಧಾಕರ ಶೆಟ್ಟಿಯವರ ಕನ್ಸ್ಟ್ರಕ್ಷನ್ ನ ಸಿಬ್ಬಂಧಿಗಳಾದ ವರುಣ್ ಹಾಗೂ ಪ್ರತೀಶ್, ಸರಕಾರಿ ಉದ್ಯೋಗಿ ಡೆನ್ಸಿಲ್ ಹರ್ಮನ್ ಹಾಗೂ ಮಾಜಿ ಸಚಿವರಾದ ರಮನಾಥ ರೈ ಅವರು ಕಾನೂನು ವಿರುದ್ಧ ವ್ಯವಹಾರ ನಡೆಸಿರುವುದು ಕಂಡು ಬಂದಿದೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ದ.ಕ. ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದು, ಈ ವರದಿಯೊಂದಿಗೆ ಸ್ವಾಧೀನಪಡಿಸಿಕೊಂಡ ನಗದು ಹಾಗೂ ದಾಖಲಾತಿಗಳನ್ನು ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ತಹಶೀಲ್ದಾರರು,ಬಂಟ್ವಾಳದ ಎ.ಸಿ.ಜೆ. ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯದ ಆದೇಶದಂತೆ ಅನುಮತಿಯನ್ನು ಪಡೆದುಕೊಂಡು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾ. 05ರಂದು ದೂರನ್ನು ಸಲ್ಲಿಸಿದ್ದಾರೆ.