ಮಂಗಳೂರು ನ 1: ಎಜೆನ್ಸಿಗಳನ್ನು ನಂಬಿ ಯಾತ್ರೆ ಹೊರಟ ತಂಡವೊಂದು ಏಜೆನ್ಸಿಯಿಂದಲೇ ಮೋಸಗೊಳಗಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯಲ್ಲಿ ಕಚೇರಿ ಇಟ್ಟುಕೊಂಡು ಕೆಜಿಎನ್ ಟ್ರಾವೆಲ್ಸ್ ಎಂಬ ಸಂಸ್ಥೆಯು ಉಮ್ರಾ ಯಾತ್ರೆಯ ನೆಪದಲ್ಲಿ ಯಾತ್ರಾರ್ಥಿಗಳಿಗೆ ಮಕ್ಕಾದಲ್ಲಿ ಮೋಸ ಮಾಡಿರುವುದಾಗಿ ಉಜಿರೆ ಕಕ್ಕಿಂಜೆಯ ನಿವಾಸಿ ಅಬ್ದುಲ್ ಹಮೀದ್ ಹಾಗೂ ಕುಟುಂಬ ತಂಡದಲ್ಲಿದ್ದ ಸಯ್ಯದ್ ಮದ್ದಡ್ಕ, ಆತೂರಿನ ಅಬ್ದುಲ್ ಖಾದರ್ ಒಟ್ಟು 32 ಮಂದಿಯ ತಂಡವು ಆರೋಪಿಸಿದೆ.
ಉಪ್ಪಿನಂಗಡಿಯಲ್ಲಿ ತನ್ನ ಪ್ರವಾಸದ ಏಜೆನ್ನಿ ಇಟ್ಟುಕೊಂಡು ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ದಿನಾಂಕ ಅಕ್ಟೋಬರ್ 17 ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬೈಯ ಮೂಲಕ ಜಿದ್ದಾಕ್ಕೆ 32 ಮಂದಿಯ ತಂಡವು ಪ್ರಯಾಣ ಬೆಳೆಸಿತ್ತು. ಆದರೆ ಜಿದ್ದಾದಿಂದ ಬಸ್ ನ ಮೂಲಕ ಮಕ್ಕಾಕ್ಕೆ ತಲುಪಿದ ಬಳಿಕ ಯಾತ್ರಾರ್ಥಿಗಳ ತಂಡಕ್ಕೆ ಆಹಾರ ನೀಡದೆ ಸತಾಯಿಸಿದ್ದರು ಎಂದು ಈ ತಂಡ ಆರೋಪಿಸಿದೆ.
ತಂಡದಲ್ಲಿದ್ದ ವಯೋವೃದ್ಧರು, ಮಹಿಳೆಯರ ಸಹಿತ ಮಕ್ಕಳು ಇದ್ದು ಪರದೇಶದಲ್ಲಿ ಪರದಾಡಬೇಕಾದ ಸ್ಥಿತಿ ಬಂದೊದಗಿತ್ತು. ಆದ್ರೆ ಈ ಬಗ್ಗೆ ಸಂಸ್ಥೆಯ ಬಶೀರ್ ಅಹ್ಮದ್ ರವರಲ್ಲಿ ಪ್ರಶ್ನಿಸಿದಾಗ, ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ. ನೀವು ಹಣಕೊಟ್ಟವರ ಬಳಿ ಪ್ರಶ್ನಿಸಿ ಎಂದು ಉಡಾಫೆಯ ಉತ್ತರ ನೀಡಿದ್ದಾರೆ . ಬಶೀರ್ ರವರು 32 ಮಂದಿಯ ಪಾಸ್ ಪೋರ್ಟ್ ಅನ್ನು ತೆಗೆದಿರಿಸಿಕೊಂಡು, ಹಿಂದಿರುಗಿಸಲು ಸತಾಯಿಸಿದರು. ಬಳಿಕ ಯಾತ್ರಾರ್ಥಿಗಳು ಒಟ್ಟುಗೂಡಿ ಪ್ರಶ್ನಿಸಿದಾಗ, ಹಿಂದಿರುಗಿಸಿದರು ಎಂದು ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಅದಲ್ಲದೆ, ಹಿಂದಿರುಗಿ ಬರುವ ವೇಳೆ ಕನೆಕ್ಟಿಂಗ್ ವಿಮಾನ ಪ್ರಯಾಣದ ಸೌಲಭ್ಯ ನೀಡಿರುವುದಿಲ್ಲ. ಇದರಿಂದಾಗಿ ತಮ್ಮ ಬಳಿಯಿದ್ದ ಲಗೇಜ್ ನಿಂದಾಗಿ 32 ಮಂದಿಯ ತಂಡವು ಪ್ರಯಾಸದ ಮೂಲಕ ಊರಿಗೆ ಇಂದು ತಲುಪಿದ್ದಾಗಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಪವಿತ್ರ ಉಮ್ರಾ ಯಾತ್ರೆಯನ್ನು ಈ ಪೊಳ್ಳು ಭರವಸೆ ನೀಡುವ ಇಂತಹ ಸಂಸ್ಥೆಗಳ ಬಗ್ಗೆ ಪ್ರತಿಯೊಬ್ಬ ಉಮ್ರಾ ಯಾತ್ರಾರ್ಥಿಗಳು ಜಾಗೃತಗೊಳ್ಳಬೇಕು. ಹಾಗೂ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ನಿಗಾ ವಹಿಸಿ, ಮುಗ್ಧ ಜನರನ್ನು ವಂಚಿಸುತ್ತಿರುವ, ಸುಳ್ಳು ಭರವಸೆ ನೀಡಿ ಮೋಸ ಮಾಡುವ ಇಂತಹ ಖಾಸಗಿ ಟ್ರಾವೆಲ್ಸ್ ನವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿರುವ ತಂಡದ ಯಾತ್ರಾರ್ಥಿಗಳು, ಮಂಗಳೂರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಹಜ್ಜ್-ಉಮ್ರಾ ಪ್ರೈವೇಟ್ ಟೂರ್ ಆರ್ಗನೈಸರ್ಸ್ ಅಸೋಸಿಯೇಶನ್ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಉಮ್ರಾ ಯಾತ್ರೆಯಿಂದ ನೊಂದಿರುವ ಉಜಿರೆಯ ಅಬ್ದುಲ್ ಹಮೀದ್ ಹಾಗೂ ಇತರರು ಆಗ್ರಹಿಸಿದ್ದಾರೆ.