ಕುಂದಾಪುರ,ಮಾ 06(MSP): ಇಲ್ಲಿನ ಭಂಡಾರ್ಕಾರ್ಸ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೋಮು ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದ ಬೆನ್ನಲ್ಲಿಯೇ ಕಾಲೇಜಿನ ಪರವಾಗಿ ಹಿಂದೂ ಮುಖಂಡರು ಪ್ರತಿಭಟನಾ ಸಭೆ ನಡೆಸಿದ್ದಾರೆ. ಕುಂದಾಪುರದ ಹರಿಪ್ರಸಾದ್ ಹೋಟೆಲ್ನ ಅಕ್ಷತಾ ಸಭಾಭವನದಲ್ಲಿ ಕರೆಯಲಾದ ಸಭೆಯಲ್ಲಿ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸೂಲಿಬೆಲೆ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹಾಗೂ ಪ್ರಾಂಶುಪಾಲ ನಾರಾಯಣ ಶೆಟ್ಟಿ ವಿರುದ್ಧ ಹರಿಹಾಯ್ದ ಪ್ರಗತಿಪರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಭಕ್ತಿ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಮೂಡಬೇಕು. ದೇಶದ ರಕ್ಷಣೆಗಾಗಿ ಬಲಿದಾನ ನೀಡಿದ ಸೈನಿಕರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸೂಲಿಬೆಲೆ ಭಾಗವಹಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ವಿದ್ಯಾರ್ಥಿಗಳು ರಾಷ್ಟ್ರಭಕ್ತರಾಗಬೇಕು ಎಂಬ ನೆಲೆಯಲ್ಲಿ ಭಂಡಾರ್ಕಾರ್ಸ್ ಕಾಲೇಜು ಪ್ರಾಂಶುಪಾಲರು ಚಕ್ರವರ್ತಿ ಸೂಲಿಬೆಲೆಯವರನ್ನು ಕರೆಸಿ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ದೇಶವನ್ನು ಮುನ್ನಡೆಸಬಲ್ಲ ನಾಯಕನಿಗೆ ಜೈಕಾರ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ. ಏನೇ ತಪ್ಪು ಮಾಡದ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿರುವುದನ್ನು ಪ್ರಶ್ನಿಸಬೇಕಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದವು.
ದೇಶದೊಳಗಿರುವ ದೇಶದ್ರೋಹಿಗಳನ್ನು ನೋಡಿ ಇಂದು ಇಡೀ ಪ್ರಪಂಚವೇ ನಗುತ್ತಿದೆ. ನಮ್ಮ ಸೈನಿಕರ ಕೆಚ್ಚೆದೆಯನ್ನು ಇವರೆಲ್ಲಾ ಒಪ್ಪುತ್ತಿಲ್ಲ ಎಂದಾದರೆ ಇಂತಹ ದೇಶದ್ರೋಹಿಗಳಿಗೆ ನಾವೇ ಸೈನಿಕರಾಗಿ ನಮ್ಮ ಸೈನಿಕರನ್ನು ಬೆಂಬಲಿಸೋಣ ಎಂದು ಆರೆಸ್ಸೆಸ್ ಪ್ರಮುಖ ಪ್ರೇಮಾನಂದ ಶೆಟ್ಟಿ ಹೇಳಿದರು.
ಸೈನ್ಯದ ಗೆಲುವಿಗೆ ಸಂಭ್ರಮಿಸಿದರೆ ಪ್ರಗತಿಪರರು ವಿರೋಧಿಸುತ್ತಾರೆ. ರಾಷ್ಟ್ರ ವಿರೋಧಿಗಳನ್ನು ಇಂತವರೇ ಬಗಲಲ್ಲಿಟ್ಟುಕೊಂಡು ಬೆಳೆಸುತ್ತಿದ್ದಾರೆ. ಹಿಂದೂಗಳನ್ನು ಮಾಸಿಕವಾಗಿ ಕುಗ್ಗಿಸುವ ಕೆಲಸವಾಗುತ್ತಿದೆ. ಇಂತಹ ಸಮಯದಲ್ಲಿ ನಾವು ದೀಪದ ಎಣ್ಣೆಯಾಗಿ ಉರಿಯಬೇಕಾಗಿದೆ ಎಂದವರು ಹೇಳಿದರು.
ಸತ್ತ ಸೈನಿಕರಾರೂ ಬಡವರಲ್ಲ. ಅವರ ಮನೆಯಲ್ಲಿ ಬೇಕಾದಷ್ಟು ಶ್ರೀಮಂತಿಕೆ ಇದೆ. ಶೇಕಡಾ ೭೫ರಷ್ಟು ಸೈನಿಕರು ಶ್ರೀಮಂತರಿದ್ದಾರೆ ಎನ್ನುತ್ತಾರೆ ಕೆಲವರು. ಹೊಟ್ಟೆ ತುಂಬಿಸಿಕೊಳ್ಳೋದಕ್ಕೆ ಹೋಗಿದ್ದರೂ ಕೂಡ ಅವರಿಗೆಲ್ಲಾ ಸೈನಿಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. ರಾಷ್ಟ್ರಭಕ್ತಿಯನ್ನು, ಸೇವೆ, ತ್ಯಾಗವನ್ನು ಅಪಮಾನಗೊಳಿಸುವ ಪ್ರಯತ್ನ ಮಾಡಿ ನಮ್ಮ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಕೆಲ ಯುವಕರು ಮಾಡುತ್ತಿದ್ದಾರೆ. ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.
ಶಂಕರ ಅಂಕದಕಟ್ಟೆ ಮಾತನಾಡಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ದೇಶದ ಬಗ್ಗೆ, ಸೈನ್ಯದ ಅಂಕಣ ಬರೆಯುವಾಗ ರಾಜಕೀಯವನ್ನು ಎಳೆದು ತರುವುದಿಲ್ಲ. ದೇಶಕ್ಕಾಗಿ ಮಡಿದವರಿಗಾಗಿ ದಿನನಿತ್ಯ ಪತ್ರಿಕೆಯಲ್ಲಿ ಬರೆಯುತ್ತಿರುವ ಚಕ್ರವರ್ತಿ ಸೂಲಿಬೆಲೆಯವರನ್ನು ತುಳಿಯುವುದಕ್ಕೆ ಪ್ರಗತಿಪರ ಚಿಂತಕರು ಹುಟ್ಟಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮದಲ್ಲೂ ಮೋದಿಗೆ ಜೈಕಾರ ಹಾಕುವ ಜನರನ್ನು ನಾವು ನೋಡಿದ್ದೇವೆ. ಜೆಎನ್ಯೂ ಕಾಲೇಜಿನಲ್ಲಿ ದೇಶವಿರೋಧಿ ಚಟುವಟಿಕೆ ನಡೆಸಿದ್ದ ಜಿಗ್ನೇಶ್ ಮೇವಾನಿ ಚುನಾವಣೆಯಲ್ಲಿ ಗೆದ್ದಾಗ ಇದೇ ಪ್ರಗತಿಪರರು ಕುಂದಾಪುರದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿದ್ದರು. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸತೀಶ್ ಪೂಜಾರಿ, ಕಿರಣ್ ಕುಂದಾಪುರ, ಪುರಸಭಾ ಸದಸ್ಯ ಪ್ರಭಾಕರ, ರಾಷ್ಟ್ರೀಯ ಸೇವಿಕ ಸಮಿತಿಯ ಪ್ರೇಮಾ ಪಡಿಯಾರ್, ವಿನೋದ್ ಪೂಜಾರಿ ಇದ್ದರು.