ಸುರತ್ಕಲ್,ಮಾ 06(MSP): ಟ್ಯೂಶನ್ ಕ್ಲಾಸ್ ಗೆ ಹೋಗಿ ಬರುವುದಾಗಿ ಹೇಳಿದ ಇಬ್ಬರು ಬಾಲಕರು ಕಣ್ಮರೆಯಾಗಿರುವ ಘಟನೆ ಸುರತ್ಕಲ್ ನ ಕೃಷ್ಣಾಪುರ 6ನೇ ಬ್ಲಾಕ್ನಲ್ಲಿ ಮಾ.05 ರ ಮಂಗಳವಾರ ರಾತ್ರಿ ನಡೆದಿದೆ. ನಾಪತ್ತೆಯಾದ ಬಾಲಕರನ್ನು ತನ್ವೀರ್ ಹಾಗೂ ತನ್ವೀಝ್ ಎಂದು ಗುರುತಿಸಲಾಗಿದೆ.
ತನ್ವೀರ್ ಇಲ್ಲಿನ ಸ್ಥಳಿಯ ನಿವಾಸಿಗಳಾದ ಅಬ್ದುರ್ರಹ್ಮಾನ್- ಜಮೀಲಾ ದಂಪತಿಯ ಪುತ್ರನಾಗಿದ್ದು, ಬಾಲಕ ತನ್ವೀಝ್ ಆಬಿದ್-ಕಮರು ದಂಪತಿ ಪುತ್ರನಾಗಿದ್ದಾನೆ.
ಪ್ರೌಢಶಾಲೆಯಲ್ಲಿ ಅಭ್ಯಾಸಿಸುತ್ತಿರುವ ಇವರಿಬ್ಬರು ಜತೆಯಾಗಿ ಪ್ರತಿದಿನ ಟ್ಯೂಶನ್ ತರಗತಿಗೆ ಹೋಗುತ್ತಿದ್ದರು. ಬಳಿಕ ಅಲ್ಲಿಂದ ಮದ್ರಸಕ್ಕೆ ತೆರಳಿ ರಾತ್ರಿ 9 ಗಂಟೆ ವೇಳೆಗೆ ಮನೆಗೆ ವಾಪಾಸ್ ಆಗುತ್ತಿದ್ದರು. ಆದರೆ ಮಂಗಳವಾರ ಸಂಜೆ ಟ್ಯೂಶನ್ಗೆ ಎಂದು ತೆರಳಿ ಮನೆಗೆ ಹಿಂತುರುಗದೆ ನಾಪತ್ತೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಇನ್ನೊಂದೆಡೆ ಮಂಗಳವಾರದಂದು ಮದ್ರಸ ತರಗತಿಗೆ ರಜೆ ಇತ್ತೆನ್ನಲಾಗಿದೆ.
ಇನ್ನು ಪೊಲೀಸರು ತನಿಖೆ ನಡೆಸಿದ ಪ್ರಕಾರ ತನ್ವೀರ್ ಮತ್ತು ತನ್ವೀಝ್ ಮಂಗಳವಾರ ಸಂಜೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಅನಂತರ ಅಲ್ಲಿಂದ ಎಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ.