ಮಂಗಳೂರು,ಮಾ 06(MSP): ತಿಲಕ ಹಾಕಿದವರು ಮಾತ್ರ ಹಿಂದುಗಳೆನ್ನಬೇಕೆ? ಹಾಗಿದ್ರೆ ತಿಲಕವಿಡದವರು ಯಾರೂ ಹಿಂದೂ ಅಲ್ಲವೇ, ನಾನು ತಿಲಕ ಹಾಕಲ್ಲ ನಾನು ಹಿಂದೂ ಅಲ್ವಾ ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾ.೬ರ ಬುಧವಾರ ನಡೆಯಲಿರುವ ಕಾಂಗ್ರೆಸ್ ಪರಿವರ್ತನಾ ಸಮಾವೇಶಕ್ಕೆ ಹಾಜರಾಗಲೆಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ,ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ "ಹಣೆಯ ಮೇಲೆ ಉದ್ದ ನಾಮ ಇಡುವವರನ್ನು ಕಂಡರೆ ನನಗೆ ಭಯ" ಎಂದು ಹೇಳಿಕೆ ನೀಡಿದ್ದರು. ಹಿಂದೂ ಸಮುದಾಯದವನ್ನು ನೋಯಿಸುವ ಮಾತುಗಳನ್ನು ಮಾಜಿ ಮುಖ್ಯಮಂತ್ರಿಗಳಾಡಿದ್ದಾರೆ ಎಂದು ರಾಜ್ಯಾದ್ಯಾಂತ ಸಿದ್ದರಾಮಯ್ಯ ವಿರುದ್ದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಜ್ಯ ಬಿಜೆಪಿಯೂ ಈ ಹೇಳಿಕೆಯನ್ನು ಖಂಡಿಸಿತ್ತು.
ಬಿಜೆಪಿಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ,ತಿಲಕ ಹಾಕಿದವರು ಮಾತ್ರ ಹಿಂದೂಗಳೆಂದು ಹೇಳಲಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಉದ್ದ ನಾಮ ಹಾಕಿದವರೆಲ್ಲರೂ ಬಿಜೆಪಿಯವರು. ಹಣೆಯ ಮೇಲೆ ಉದ್ದ ನಾಮ ಇಡುವವರನ್ನು ಕಂಡರೆ ನನಗೆ ಭಯ ಆಗುತ್ತದೆ. ತಿಲಕ ಅಂದ್ರೆ ಸಣ್ಣದಾಗಿ ಹಾಕಬೇಕು. ದೊಡ್ಡ ದೊಡ್ಡ ನಾಮ ಕಂಡ್ರೆ ನನಗೆ ಭಯ ಆಗುತ್ತದೆ ಪ್ರತಿಕ್ರಿಯಿಸಿದ್ದಾರೆ.ಇನ್ನು ಸೀಟು ಹಂಚಿಕೆಯ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅವರು,ಟಿಕೆಟ್ ಗಾಗಿ ಮೈತ್ರಿ ಪಕ್ಷದವರಿಬ್ಬರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗೋದು ಸಹಜ
ಆದರೆ ಇನ್ನು ಮೂರು ನಾಲ್ಕು ದಿನದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯವಾಗುತ್ತದೆ. ಜೆಡಿಎಸ್ ಕಾರ್ಯಕರ್ತರು ಬೇಡಿಕೆ ಇಟ್ಟಂತೆ ನಮ್ಮ ಕಾರ್ಯಕರ್ತರು ಸೀಟು ಕೇಳ್ತಾರೆ ಹಾಗೆಂದು ನಮ್ಮ ಎಂಪಿ ಸೀಟು ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಅವರ ಹಾಲಿ ಸಂಸದರಿರುವ ಕಡೆ ನಮಗೆ ಸೀಟು ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಚಿಂಚೋಳಿ ಶಾಸಕ ಉಮೇಶ್ ಜಾಧವ್ ರಾಜಿನಾಮೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ , ಉಮೇಶ್ ಜಾಧವ್ ಸೇರಿ ಇತರ ನಾಲ್ವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಪಿಟಿಷನ್ ಹಾಕಿದ್ದೇವೆ. ಪಿಟಿಷನ್ ಇನ್ನೂ ಪೆಂಡಿಂಗ್ ಇದೆ. ಸ್ವೀಕರ್ ಇನ್ನೂ ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಉಮೇಶ್ ಜಾದವ್ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸೋದು ಅಪರಾಧವಾಗುತ್ತದೆ.ಕಾಂಗ್ರೆಸ್ ಶಾಸಕರಾಗಿ ಅವರು ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ ಈ ವಿಚಾರವಾಗಿಯೂಜಾಧವ್ ವಿರುದ್ದ ಮತ್ತೊಂದು ದೂರು ದಾಖಲಿಸಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.