ಬಂಟ್ವಾಳ,ಮಾ 06(MSP): ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೊಳಲಿ ಸಾವಿರ ಸೀಮೆ ಸೀರೆಗಳಿಂದ ಶೃಂಗಾರಗೊಂಡಿದ್ದು, ಎಲ್ಲೆಡೆಯಲ್ಲೂ ಕೇಸರಿಪತಾಕೆಗಳೇ ಮೇಳೈಸುತ್ತಿದೆ. ದೇವಸ್ಥಾನದ ಆವರಣ ಸೇರಿದಂತೆ ಸಾವಿರ ಸೀಮೆ ವಾಪ್ತಿಯಲ್ಲಿನ ಹಲವು ದ್ವಾರಗಳಲ್ಲಿ, ಜರಿಸೀರೆಗಳನ್ನೇ ಅಂದವಾಗಿ ಜೋಡಿಸಿ ಊರೂರುಗಳೇ ಅಲಂಕಾರಗೊಂಡು, ಹತ್ತೂರ ಭಕ್ತರನ್ನು ಸ್ವಾಗತಿಸುತ್ತಿದೆ.
ಪೊಳಲಿಗೆ ಹರಕೆಯ ರೂಪದಲ್ಲಿ ಬಂದಿರುವ ಪಟ್ಟೆ ಸೀರೆಗಳನ್ನು ನಗರಾಲಂಕಾರಗೊಳಿಸಲು ವಿಶೇಷ ಅನುಮತಿ ಪಡೆದುಕೊಂಡು ಸಾವಿರ ಸೀಮೆಗಳನ್ನು ಅದರಿಂದಲೇ ಅಲಂಕರಿಸಲಾಗಿದೆ. ಸೀರೆಯಿಂದಲೇ ನಿರ್ಮಿಸಿದ ದ್ವಾರಗಳು, ತಳಿರುತೋರಣಗಳಿಂದಾಗಿ ಬ್ರಹ್ಮಕಲಶೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿದೆ. ಇಡೀ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ ಸೀರೆಯಿಂದಲೇ ನಗರವನ್ನು ಅಲಂಕರಿಸಲಾಗಿದ್ದು, ಇದು ಪೊಳಲಿ ಬ್ರಹ್ಮಕಲಶೋತ್ಸವದ ವಿಶೇಷತೆಯಾಗಿದೆ.
ಜೊತೆಗೆ ಬ್ಯಾನರ್, ಬಂಟಿಂಗ್ಸ್ ಗಳನ್ನು ಅಳವಡಿಸಲಾಗಿದ್ದು, ಬಂಟ್ವಾಳ- ಬಿ.ಸಿ.ರೋಡ್ನಿಂದ ಪೊಳಲಿ ದ್ವಾರ ಮೂಲಕ ದೇವಸ್ಥಾನದವರೆಗೆ ಹಾಗೂ ಗುರುಪುರದ್ವಾರದಿಂದ ಪೊಳಲಿಯವರೆಗೆ ರಸ್ತೆಯುದ್ದಕ್ಕೂ ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದೆ. ಮೂಡುಬಿದಿರೆಯಿಂದ ಮಂಗಳೂರು, ಬಂಟ್ವಾಳ, ಬಿ.ಸಿ. ರೋಡ್ ಸೇರಿ ಹಲವು ಪ್ರದೇಶಗಳು ಸಂಪೂರ್ಣವಾಗಿ ಶೃಂಗಾರಗೊಂಡು ದೂರದೂರಿನಿಂದ ಬರುವ ಭಕ್ತರನ್ನು ಬರಮಾಡಿಕೊಳ್ಳುತ್ತಿದೆ.
ಒಟ್ಟು 10 ದಿನಗಳ ಕಾಲ ನಡೆಯುವ ಉತ್ಸವದ ಹತ್ತು ದಿನ ಹತ್ತು ಬಗೆಯ ವಿಶೇಷ ಸಿಹಿತಿಂಡಿಗಳು ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗಲಿದೆ. ಚಂದ್ರಶೇಖರ್ ರಾವ್ ಮರವೂರು, ಪ್ರಮೋದ್ ಕಾರಂತ್ ಪಚ್ಚನಾಡಿ, ಮೋಹನ್ ಭಟ್, ಕೃಷ್ಣಾನಂದ ಹೊಳ್ಳ ಗಂದಾಡಿ ಭೋಜನ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಪಾಕಶಾಲೆಯಲ್ಲಿ ಸುಮಾರು 5 ಲಕ್ಷ ಲಾಡು, 3 ಲಕ್ಷ ಮೈಸೂರು ಪಾಕ್, 3 ಲಕ್ಷ ಕಡಿ, ಕಾಶಿ ಹಲ್ವಗಳನ್ನು ಸಿದ್ಧಗೊಳಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನದಿಂದ ನಿರಂತರ ಅನ್ನದಾಸೋಹ, ಸಂಜೆ ಉಪಹಾರ ನೀಡಲಾಗುತ್ತಿದೆ. ಊಟೋಪಚಾರಕ್ಕೆ ಹಲವು ಬಗೆಯ ಪಲ್ಯ, ಸಾಂಬಾರು ಇರಲಿವೆ.
ಬಾಣಸಿಗರ ಜತೆಗೆ ಸ್ವಯಂಸೇವಕರ ತಂಡವೂ ಸಾಥ್ ನೀಡುತ್ತಿದ್ದು, ತರಕಾರಿ ಹಚ್ಚುವುದು, ಮಸಾಲೆ ಸಾಮಗ್ರಿಗಳನ್ನು ಸ್ವಚ್ಚಗೊಳಿಸುವ ಕೆಲಸ ಸಹಿತ ನಾನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭೋಜನ ಬಡಿಸಲು ಬಾಳೆಎಲೆಯ ವ್ಯವಸ್ಥೆ ಇದ್ದು, ಇದರೊಂದಿಗೆ ಬಫೆ ಸೌಲಭ್ಯವೂ ಇರಲಿದೆ. ಸ್ವಯಂಸೇವಕರು ಪಾಳಿಯಲ್ಲಿ ಆಹಾರವನ್ನು ಬಡಿಸಲಿದ್ದಾರೆ.
ಹತ್ತು ಲಕ್ಷ ಮಂದಿಗೆ ಊಟದ ವ್ಯವಸ್ಥೆ:
ಬ್ರಹ್ಮಕಲಶದ ಪ್ರಯುಕ್ತ ಮಾ. 4ರಿಂದ 13ರ ತನಕ ವಿವಿಧ ಭಕ್ಷ್ಯ ಭೋಜನಗಳನ್ನು ಸುಮಾರು 50 ಮಂದಿ ಬಾಣಸಿಗರ ತಂಡ ಸಿದ್ಧಪಡಿಸಲಿದೆ.
ವಿಶಾಲವಾದ ಪಾರ್ಕಿಂಗ್:
ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆಗಾಗಿ ಸುಮಾರು 22 ಎಕ್ರೆ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನ ನಿಲುಗಡೆಗೆ ಯಾವುದೇ ಅಡಚಣೆಯಾಗದಂತೆ ಸ್ವಯಂಸೇವಕರ ದಂಡೇ ಕಾರ್ಯನಿರ್ವಹಿಸುತ್ತಿದೆ