ಮಂಗಳೂರು,ಮಾ06(AZM):ನಾವು ಹಿಂದೂ,ಮುಸ್ಲಿಂ ಎಂದು ಜಾತಿ-ಭೇಧ ಮಾಡುವುದಿಲ್ಲ. ಎರಡೂ ಸಮುದಾಯವನ್ನು ಒಟ್ಟುಗೂಡಿಸಿ ರಾಮ ಮಂದಿರವನ್ನು ಕಟ್ಟುತ್ತೇವೆ. ಆದರ್ಶ ರಾಮರಾಜ್ಯ ಆಗುವುದಾದರೆ ರಾಜ್ಯದ ಮುಸ್ಲಿಮರು ಮೊದಲು ಸ್ವಾಗತಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ನಡೆದ ಪರಿವರ್ತನಾ ಸಭೆಯನ್ನುದ್ದೇಶಿಸಿ ಈ ಕುರಿತು ಮಾತನಾಡಿದರು. ನಾವು ಪ್ರಧಾನಿ ಮೋದಿಯವರ ಹಾಗೆ ಸುಳ್ಳು ಮಾತುಗಳನ್ನು ಆಡುವುದಿಲ್ಲ. ರಾಮಮಂದಿರ ಕಟ್ಟುವುದಕ್ಕೆ ನಾವು ತಯಾರಿದ್ದೇವೆ ಎಂದು ಹೇಳಿದರು. ಬಿಜೆಪಿಯವರು ಈಗ ರಾಮಮಂದಿರವನ್ನು, ಶ್ರೀರಾಮನನ್ನು ಬಿಟ್ಟು ಪಾಕಿಸ್ತಾನವನ್ನು ಹಿಡಿದಿದ್ದಾರೆ ಎಂದ ಅವರು, ಪಾಕಿಸ್ತಾನವು ಬಾಂಬ್ ಹಾಕಿದರೆ ನಾವು ಸಾಯಲ್ವಾ ಎಂದು ಪ್ರಶ್ನಿಸಿದರು. ಮುಸಲ್ಮಾನರಿಗೆ ಬೀಳದಿರೋ ಬಾಂಬ್ ಪಾಕಿಸ್ತಾನ ಸೃಷ್ಟಿಸಿದೆಯಾ ಎಂದು ಪ್ರಶ್ನಿಸಿದರು.
ಇನ್ನು ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ ಇಬ್ರಾಹಿಂ ಅವರು, ಹೆಂಡತಿ ಮಕ್ಕಳ ಬಗ್ಗೆ ಚಿಂತೆ ಇಲ್ಲದ ಮೋದಿಯವರು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹೋಗಿರುವ ಕುರಿತು ಮಾತನಾಡಿದ ಅವರು, ನವಾಜ್ ಶರೀಫ್ ಅವರು ಮೋದಿಯವರನ್ನು ಮದುವೆಗೆ ಕರೆದಿದ್ದಾರ? ಕರೆಯದ ಮದುವೆಗೆ ಪಾಕಿಸ್ತಾನಕ್ಕೆ ಯಾಕೆ ಹೋಗಿದ್ರಾ? ಎಂದು ಕಾಂಗ್ರೆಸ್ ಮುಂಖಂಡ ಇಬ್ರಾಹಿಂ ಪ್ರಶ್ನಿಸಿದರು.