ಮಂಗಳೂರು,ಮಾ 07 (MSP): ಆತ್ಮಹತ್ಯೆ ಮಾಡಲೆಂದು ಉಳ್ಳಾಲ ನೇತ್ರಾವತಿ ಸೇತುವೆಯಿಂದ ಬುಧವಾರ ಮಧ್ಯಾಹ್ನ ನದಿಗೆ ಹಾರಿದ್ದ ಮಂಜೇಶ್ವರ ಸಮೀಪದ ತೂಮಿನಾಡಿನ ನೌಫಾಲ್ (23) ಅವರು ಈಜಿ ದಡ ಸೇರಿದ್ದಾರೆ. ಪ್ರೇಮ ವೈಫಲ್ಯ ದಿಂದ ನೊಂದು ನೀರಿಗೆ ಹಾರಿದ್ದು, ಬಳಿಕ ಮನಸ್ಸು ಬದಲಾಯಿಸಿ ದಡ ಸೇರಿದ್ದಾನೆ.
ಮಧ್ಯಾಹ್ನ ೨ ಗಂಟೆ ವೇಳೆಗೆ ತನ್ನ ಸ್ನೇಹಿತನ ಜತೆಗೆ ತ್ರಿ ಚಕ್ರ ಟೆಂಪೊ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ನೌಫಾಲ್ ನೇತ್ರಾವತಿ ಸೇತುವೆ ಸೇತುವೆ ಮಧ್ಯೆ ತಲುಪಿದಾಗ ನನಗೆ ವಾಂತಿ ಬರುತ್ತಿದೆ ಎಂದು ಸ್ನೇಹಿತನಿಗೆ ಹೇಳಿ ಟೆಂಪೊ ನಿಲ್ಲಿಸಿದ್ದ. ಆದರೆ ನಂತರ ಸೇತುವೆ ಬದಿಗೆ ಹೋದ ನೌಫಾಲ್ ವಾಂತಿ ಮಾಡುವ ನೆಪದಲ್ಲಿ ಬಗ್ಗಿ ನೇತ್ರಾವತಿ ನದಿಗೆ ಹಾರಿದ್ದಾನೆ.ನದಿ ನೀರಿಗೆ ಬಿದ್ದ ಆತ ನೀರಿನಿಂದ ಮೇಲಕ್ಕೆ ಬಂದ ತಕ್ಷಣ ಈಜಿ ಸೇತುವೆ ಪಿಲ್ಲರ್ ಪಕ್ಕದ ಸ್ಲ್ಯಾಬ್ ಹತ್ತಿ ಕುಳಿತಿದ್ದಾನೆ.
ಯುವಕ ನದಿಗೆ ಹಾರಿದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಜಮಾಯಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಮಂಗಳೂರುನಗರ ದಕ್ಷಿಣ ಟ್ರಾಫಿಕ್ ಇನ್ಸ್’ಫೆಕ್ಟರ್ ಗುರುದತ್ ಕಾಮತ್ ಕೂಡಾ ಸ್ಥಳದಲ್ಲಿದ್ದು ಸಾರ್ವಜನಿಕ ಸಹಕಾರದೊಂದಿಗೆ ನೌಫಾಲ್ ನನ್ನು ಮೇಲ್ಗಡೆ ಕರೆ ತಂದು ಬಳಿಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. ಪ್ರೇಮವೈಫಲ್ಯದಿಂದ ನದಿಗೆ ಹಾರಿದ್ದೇನೆ ಎಂದು ಯುವಕ ವಿಚಾರಣೆ ಸಂದರ್ಭ ಹೇಳಿಕೆ ನೀಡಿದ್ದಾನೆ.