ಉಳ್ಳಾಲ ನ 2: ದಿನಸಿ ಅಂಗಡಿಗೆ ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 65 ರ ಹರೆಯದ ವೃದ್ಧ ಅಂಗಡಿ ಮಾಲೀಕನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉಚ್ಚಿಲ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ದೂರು ದಾಖಲಾಗಿದೆ. ಉಚ್ಚಿಲದಲ್ಲಿ ದಿನಸಿ ಅಂಗಡಿ ಹೊಂದಿರುವ ಈತ ಬುಧವಾರದಂದು ಸಂಜೆ ಅಂಗಡಿಗೆ ಬಂದಿದ್ದ 7 ರ ಹರೆಯದ ಬಾಲಕಿಗೆ ಅಂಗಡಿಯೊಳಗಡೆ ಕಿರುಕುಳ ನೀಡಿದ್ದ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದಳು. ಇದನ್ನು ಬಾಲಕಿ ತಾಯಿ ಮತ್ತು ಅಜ್ಜಿ ಅಂಗಡಿಗೆ ಬಂದು ಪ್ರಶ್ನಿಸಲು ಮುಂದಾದಾಗ ಉಡಾಫೆಯಿಂದ ವರ್ತಿಸಿದ್ದನು. ವಿಚಾರ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಎರಡು ಕೋಮಿನ ಜನ ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಆರೋಪಿತ ಅಬ್ದುಲ್ ರಝಾಕ್ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ. ಸ್ಥಳಕ್ಕಾಗಮಿಸಿದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಸಹಿತ ಉಳ್ಳಾಲ ಅಪರಾಧ ಹಾಗೂ ಕಾನೂನು ವಿಭಾಗದ ಉಪನಿರೀಕ್ಷಕರು ಜಮಾಯಿಸಿದ ಜನರನ್ನು ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದರು. ಬಳಿಕ ಅಂಗಡಿಯನ್ನು ಮುಚ್ಚಿಸಿದ್ದಾರೆ.