ಮಂಗಳೂರು, ಮಾ 07(SM):ದೇಶದ ರಕ್ಷಣಾ ಇಲಾಖೆಯಲ್ಲಿದ್ದ ದಾಖಲೆಗಳು ಕಳವಾಗಿದೆ. ಈ ಪ್ರಕರಣ ದೇಶದ ಇತಿಹಾಸದಲ್ಲೇ ದೊಡ್ಡ ದುರಂತವಾಗಿದ್ದು, ದಾಖಲೆ ಕಳವಿಗೆ ಪ್ರಧಾನಿಯೇ ನೇರ ಹೊಣೆ ಎಂದು ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು. ರಫೇಲ್ ಹಗರಣ ದೇಶದಲ್ಲೇ ದೊಡ್ಡ ಹಗರಣವಾಗಿದೆ. ಕೇಂದ್ರ ಸರ್ಕಾರ ರಫೇಲ್ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ರಫೇಲ್ ಹಗರಣದ ಮೂಲಕ ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ದೇಶದ ಸೈನಿಕರು ಹತಾಶರಾಗಿದ್ದಾರೆ. ದೇಶದಲ್ಲಿ ರಕ್ಷಣಾ ತಂತ್ರ ವಿಫಲಗೊಂಡಿದೆ. ದೇಶದ ಜನರ ವಿಶ್ವಾಸವನ್ನು ಮೋದಿ ಉಳಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇನ್ನು ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಸೈದ್ದಾಂತಿಕವಾಗಿ ಬಿಜೆಪಿ ಸೋಲಿಸಲು ಜನರು ರೆಡಿಯಾಗಿದ್ದಾರೆ. ಬಿಜೆಪಿ ಐದು ವರ್ಷಗಳಲ್ಲಿ ಜನರ ಸಮಸ್ಯೆಗಳಿಗೆ ಸಹಕರಿಸಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.