ಕಾರ್ಕಳ, ನ 2: ಮರಣದ ನಂತರದಲ್ಲಿ ದೇಹದ ಅಮೂಲ್ಯ ಅಂಗಾಂಗಗಳು ಇನ್ನೊಂದು ಜೀವಕ್ಕೆ ನೆರವಾಗಲಿ ಎಂಬ ನಿಟ್ಟಿನಲ್ಲಿ ಕುಕ್ಕೂಂದೂರು ಗ್ರಾಮದ ಅಯ್ಯಪ್ಪ ನಗರದಲ್ಲಿ ವಾಸವಾಗಿರುವ ದಂಪತಿಗಳು ತಮ್ಮ ದೇಹದಾನಕ್ಕೆ ಮುಂದಾಗುವ ಮೂಲಕ ಕನ್ನಡ ರಾಜೋತ್ಸವದ ಸಭಾ ಕಾರ್ಯಕ್ರರ್ಮದಲ್ಲಿ ಆಸೀನರಾಗಿದ್ದ ಪೇಕ್ಷಕ ವರ್ಗ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನೇ ನಿಬ್ಬೇರಗಾಗಿಸುವಂತೆ ಮಾಡಿದ್ದಾರೆ. ಎನ್.ಶಿವನಂದ ಪ್ರಭು ಹಾಗೂ ಪೂರ್ಣಿಮಾ ಪ್ರಭು ದಂಪತಿ ಈ ಸತ್ಕಾರ್ಯಕ್ಕೆ ಮುಂದಾದವರು.
ವೃತ್ತಿಯಲ್ಲಿ ಶಾಲಾ ವಾಹನದ ಚಾಲಕರಾಗಿದ್ದು, ಕನ್ನಡ ಧ್ವಜ ಹಾಗೂ "ಕನ್ನಡದ ಕಂದ" ಎಂಬ ನಾಮಫಲಕವನ್ನು ಅದರಲ್ಲಿ ಜೋಡಿಸುವ ಮೂಲಕ ಕನ್ನಡಭಿಮಾನವನ್ನು ತೋರ್ಪಡಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನಾಟಕ ರಚನೆ,ನಿರ್ದೇಶನ ಹಾಗೂ ಯಕ್ಷಗಾನ ಅಭಿನಯ ಮೂಲಕ ಜನಮನ ಗೆಲ್ಲುವಲ್ಲಿ ಕಾರಣರಾಗಿದ್ದಾರೆ.
ಪತ್ನಿ ಪೂರ್ಣಿಮಾ ಪ್ರಭು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗೌರಿ,ಗಣೇಶ್ ಎಂಬ ಇಬ್ಬರು ಮಕ್ಕಳೊಂದಿಗೆ ಜೀವನ ನಿರ್ವಹಿಸುತ್ತಿದ್ದ ಈ ದಂಪತಿಗಳು ತಮ್ಮ ದೃಢ ನಿರ್ಧಾರ ಕೈಗೊಂಡು ಇಂತಹ ಒಂದು ಸತ್ಕಾರ್ಯಕ್ಕೆ ಮುಂದಾಗಿರುವುದು ನಾಗರಿಕರ ಶ್ಲಾಘನೆಗೆ ಕಾರಣರಾಗಿದ್ದಾರೆ.
ಕಾರ್ಕಳ ತಹಶೀಲ್ದಾರ್ ಮಹಾದೇವಯ್ಯ ಅವರ ಸಮ್ಮಖದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಅನಾಟಮಿ (ದೇಹದ ಅಂಗಾಂಗಗಳನ್ನು ತೆಗೆಯುವ ಹಾಗೂ ಕಸಿಗೊಳಿಸುವ) ವಿಭಾಗದ ಮುಖ್ಯಸ್ಥರ ಪರವಾಗಿ ಡಾ.ಸತೀಶ್ ನಾಯಕ್ ಅವರಿಗೆ ದಂಪತಿಗಳು ಕರಾರು ಪತ್ರವನ್ನು ಒಪ್ಪಿಸಿದ್ದಾರೆ.
ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಪುರಸಭಾ ಅಧ್ಯಕ್ಷೆ ಅನಿತಾ ಆರ್.ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ಜ್ಯೋತಿ, ದಿವ್ಯಶ್ರೀ, ರೇಷ್ಮಾ ಮೊದಲಾದವರು ಉಪಸ್ಥಿತರಿದ್ದರು.
ಎನ್.ಶಿವನಂದ ಪ್ರಭು ಹಾಗೂ ಪೂರ್ಣಿಮಾ ಪ್ರಭು ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕರಾರಿನಲ್ಲಿ ಪ್ರಮುಖ ಅಂಶ ಏನಿದೆ?
ಸನಾತನ ಹಿಂದು ಧರ್ಮದ ಸಂಪ್ರದಾಯದಂತೆ ಕುಟುಂಬಸ್ಥರ ಕೋರಿಕೆ ಇದ್ದಲ್ಲಿ ಅಂತ್ಯಕ್ರಿಯೆಗೆ ಸಂಬಂಧ ಪಟ್ಟಂತೆ ದಾನ ಮಾಡಿದ ದೇಹದ ಕೆಲವು ಭಾಗ( ಪಕ್ಕೆಲುಬು) ನೀಡಿ ಸಹಕರಿಸಬೇಕು ಎಂದು ಅವರು ಕರಾರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.