ಕುಂದಾಪುರ,ಮಾ 08 (MSP): ರಾಷ್ಟ್ರಧ್ವಜವನ್ನೇ ಚಿಂದಿ ಮಾಡಿ ಹರಿದು ಸಾರ್ವಜನಿಕ ಸ್ಥಳದಲ್ಲಿ ಎಸೆದ ಘಟನೆ ಮಾ.08 ರ ಶುಕ್ರವಾರ ಬೆಳಿಗ್ಗೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.
ಕುಮದಾಪುರದ ಮುಖ್ಯ ರಸ್ತೆಯಲ್ಲಿರುವ ಕುಂದೇಶ್ವರ ದೇವಸ್ಥಾನದ ಎದುರುಗಡೆಯ ಸೌತ್ ಫೀಲ್ಡ್ ಪೈಂಟ್ಸ್ ಲಿಮಿಟೆಡ್ ಸಂಸ್ಥೆಗೆ ಕಾದಿರಿಸಲಾದ ಸ್ಥಳದಲ್ಲಿ ದುಷ್ಕೃತ್ಯ ಬೆಳಕಿಗೆ ಬಂದಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ.
ಘಟನೆಯ ವಿವರ: ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿ ಕಾರ್ಮಿಕರಾದ ಬಶೀರ್ ಹಾಗೂ ಮನೀಷ್ ಪಾಂಡೆ ಎಂಬುವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ರಾಶಿಯಾಗಿ ಹಾಕಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನಿಡಿದ್ದಾರೆ. ತಕ್ಷಣ ಸ್ಥಳೀಯರಾದ ಮಹೇಶ್ ಹಾಗೂ ಅಕ್ಷಯ್ ಎಂಬುವರು ಬಂದು ನೋಡಿದಾಗ ರಾಷ್ಟ್ರ ಧ್ವಜವನ್ನು ಕತ್ತರಿಸಿ ಎಸೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರ ಗಮನಕ್ಕೆ ಬಂದು ಅದನ್ನು ಪುರಸಭೆಗೆ ಹಸ್ತಾಂತರಿಸಲಾಯಿತು.
ಬಟ್ಟೆಯಿಂದ ಮಾಡಲಾಗಿದ್ದ ರಾಷ್ಟ್ರಧ್ವಜ ಇದಾಗಿದ್ದು, ಇದರ ಜೊತೆಗೆ ಇತರ ತ್ಯಾಜ್ಯ ಬಟ್ಟೆಗಳೂ ಇದ್ದು, ಯಾವುದೋ ಗ್ರಾಫಿಕ್ ಡಿಸೈನ್ ಅಥವಾ ಧ್ವಜ ತಯಾರಿಕೆ ಮಾಡುವವರು ಈ ಕೃತ್ಯ ನಡೆಸಿರಬಹುದು ಎಂಬುದಾಗಿ ಅಂದಾಜಿಸಲಾಗಿದ್ದು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ.