ಬಂಟ್ವಾಳ, ಮಾ 08(SM): ಮಹಿಳೆಯೊಬ್ಬರು ತನ್ನ ಮಗುವನ್ನು ಮಾರಾಟ ಮಾಡಲೆತ್ನಿಸಿದ ಘಟನೆ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾಗಿರುವ ಮಹಿಳೆಗೆ ಅವಳಿ ಮಕ್ಕಳು ಜನಿಸಿದ್ದವು. ಈ ಪೈಕಿ ಒಂದು ಮಗುವನ್ನು ಪರಿಚಯಸ್ಥರಿಗೆ ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ಸ್ಥಳೀಯ ಗ್ರಾಮಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಾವಲು ಸಮಿತಿ ಸಭೆಯನ್ನು ಕರೆದಿದ್ದು ಸ್ಥಳೀಯ ಗ್ರಾ.ಪಂ. ಸದಸ್ಯರು ಚರ್ಚಿಸಿ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಮಹಿಳೆ ತನ್ನ ಒಂದು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳಾ ಅಭಿವೃದ್ದಿ ಇಲಾಖಾಧಿಕಾರಿಗಳು ಪ್ರತಿಕ್ರಿಯಿಸಿದ್ದು ಮಗುವಿನ ಆರೈಕೆ ಹಾಗೂ ಆರೋಗ್ಯದ ಹಿತದೃಷ್ಟಿಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳ ಸಲಹೆ ಪಡೆಯುವುದಾಗಿ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾನೂನು ಸಂಘರ್ಷಕ್ಕೊಳಗಾದ ಮಗು ಹಾಗೂ ತಾಯಿಯ ಆರೈಕೆಗೆ ಸಂಬಂದಪಟ್ಟು ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕಾವಲು ಸಮಿತಿ ಸದಸ್ಯ ಆದಂ ಕುಂಞ ಹೇಳಿದ್ದಾರೆ.