ಉಡುಪಿ, ಮಾ 08(SM): ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಅಳವಡಿಸಿದ ರಾಹುಲ್ ಗಾಂಧಿ ಭಾವಚಿತ್ರವಿರುವ ಬೃಹತ್ ಬ್ಯಾನರ್ ಗೆ ಕಲ್ಸಂಕ ಬಳಿ ಹಾನಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಕಲ್ಸಂಕ ಜಂಕ್ಷನ್ ಬಳಿ ಭಾನುವಾರ ಮಧ್ಯಾಹ್ನ ನಡೆಯಲಿರುವ ಸಮಾವೇಶದ ಪ್ರಚಾರಕ್ಕಾಗಿ ಹಾಕಲಾಗಿರುವ ಬ್ಯಾನರ್ ಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಇದೀಗ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೃತ್ಯ ನಡೆಸಿದವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಜನಪರವಾದ ಕಾರ್ಯಕ್ರಮಗಳನ್ನು ತಿಳಿಸಲು ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಸಿದ್ದತೆ ಮತ್ತು ಪ್ರಚಾರ, ಜನಸ್ಪಂದನದ ರೂಪುರೇಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕಾಂಗ್ರೆಸ್ ನ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದೆ.
ಮಾಜಿ ಮುಖ್ಯಮಂತ್ರಿಗಳು ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್, ಸಚಿವರಾದ ಯು.ಟಿ. ಖಾದರ್, ಮಾಜಿ ಸಚಿವರಾದ ರಮಾನಾಥರ ರೈ ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದಾರೆ.