ಬಂಟ್ವಾಳ,ಮಾ 09(MSP): ಕಾರ್ಯಕ್ರಮದ ನಿಮಿತ್ತ ಮಾ. 9 ರಂದು ಶನಿವಾರ ಮಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಂಜೆ 4 ಗಂಟೆಗೆ ಬ್ರಹ್ಮಕಲಶ ಸಡಗರದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೂ ಅಗಮಿಸಿ ದೇವರದರ್ಶನ ಪಡೆಯಲಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದ್ದಾರೆ.
ಶುಕ್ರವಾರ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ.ಜಿಲ್ಲೆಗೆ ಆಗಮಿಸುತ್ತಿರುವ ರಾಜನಾಥ್ ಸಿಂಗ್ ಅವರು ಪೊಳಲಿ ಕ್ಷೇತ್ರಕ್ಕೂ ಭೇಟಿ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ರವರ ಮೂಲಕ ಮಾಡಿರುವ ಮನವಿಗೆ ಸಚಿವರು ಪೊಳಲಿ ಕ್ಷೇತ್ರಕ್ಕೆ ಆಗಮಿಸಲು ಒಪ್ಪಿದ್ದಾರೆ ಎಂದು ಹೇಳಿದರು.
ಮಂಗಳೂರು ಕಾರ್ಯಕ್ರಮ ಮುಗಿಸಿ ಕ್ಷೇತ್ರಕ್ಕೆ ಆಗಮಿಸುವ ಅವರು ದೇವರ ದರ್ಶನ ಪಡೆದು ಇಲ್ಲಿಂದಲೇ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅವರು ಆಗಮಿಸುವ ವೇಳೆ ಹೆಚ್ಚಿನ ಭದ್ರತೆ ಇದ್ದು, ಈ ಸಮಯದಲ್ಲಿ ಕೆಲ ಹೊತ್ತು ಅಗುವ ಅಡಚಣೆಗೆ ಭಕ್ತರು ಸಹಕರಿಸುವಂತೆ ಮನವಿ ಮಾಡಿದ ಶಾಸಕರು, ಈಗಾಗಲೇ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಭದ್ರತಾ ವ್ಯವಸ್ಥೆ ಕೈಗೊಳ್ಳಲಿದ್ದಾರೆ ಎಂದರು. ಹಾಗೆಯೇ ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಮಾ.12 ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಮೊದಲ 5ದಿನಗಳಲ್ಲಿ ನಿತ್ಯವೂ ಜಿಲ್ಲೆ,ಹೊರಜಿಲ್ಲೆಯಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಎಲ್ಲಾ ದೃಷ್ಟಿಯಿಂದಲೂ ಸಕಲ ವ್ಯವಸ್ಥೆ ಗಳನ್ನು ಕೈಗೊಳ್ಳಲಾಗಿದೆ.ಶುಕ್ರವಾರವು ಸುಮಾರು 50 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.ಮಾ.10 ಹಾಗೂ 13 ರಂದು ಲಕ್ಷಾಂತರ ಮಂದಿ ಭಕ್ತರು ಅಗಮಿಸಿವ ನಿರೀಕ್ಷೆ ಇದೆ ಎಂದರು.ಈ ವೇಳೆ ಯು.ತಾರಾನಾಥ ಆಳ್ವ, ಯು.ಸುಭಾಷ್ ನಾಯ್ಕ್, ಕೃಷ್ಣಕುಮಾರ್ ಪೂಂಜ ಫರಂಗಿಪೇಟೆ, ಕೃಷ್ಣರಾಜ ಮಾರ್ಲ ಮುತ್ತೂರು ಮೊದಲಾದವರಿದ್ದರು.
ಐಜಿಪಿ-ಎಸ್ಪಿ ಪರಿಶೀಲನೆ
ಕೇಂದ್ರ ಗೃಹ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಶುಕ್ರವಾರ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರು ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ಭದ್ರತೆಯ ಕುರಿತು ಪರಿಶೀಲನೆ ನಡೆಸಿದರು. ಆರಂಭದಲ್ಲಿ ದೇವರ ದರ್ಶನ ಪಡೆದು ಬಳಿಕ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಶಾಸಕ ರಾಜೇಶ್ ನಾಯ್ಕ್ ಅವರಿಂದ ಮಾಹಿತಿ ಪಡೆದರು. ಜತೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಜತೆಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀಪ್ರಸಾದ್ ಅವರಿಗೆ ಸೂಚಿಸಿದರು. ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್, ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಮೊದಲಾದವರಿದ್ದರು. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ಭೇಟಿಯ ಹಿನ್ನಲೆಯಲ್ಲಿ ಶುಕ್ರವಾರ ಎಎಸ್ಪಿ ಸೈದುಲ್ ಅಡಾವತ್ ಅವರ ನೇತೃತ್ವದಲ್ಲಿ ಸಂಜೆಯಿಂದಲೇ ಬಂಟ್ವಾಳ ಗ್ರಾಮಾಂತರ ಎಸ್ ಐ ಪ್ರಸನ್ನ ಮತ್ತವರ ಸಿಬಂದಿಗಳು ಭದ್ರತಾ ಕಾರ್ಯ ಚುರುಕುಗೊಳಿಸಿದ್ದಾರೆ.