ಕುಂದಾಪುರ, ಮಾ 09(MSP): ಮಾರ್ಚ್ ೧ರಂದು ಮನೆಯ ಬೆಡ್ ರೂಮಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಒಂಟಿ ಮಹಿಳೆ ಹೆಮ್ಮಾಡಿ ಹರೆಗೋಡು ನಿವಾಸಿ ಗುಲಾಬಿ (55) ಕೊಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಕೊಲೆಯ ಆರೋಪಿಯೆನ್ನಲಾಗಿರುವ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಂದಾಪುರ ತಾಲೂಕಿನ ಮುದೂರು ನಿವಾಸಿ ರವಿರಾಜ್ ಎಂದು ಗುರುತಿಸಲಾಗಿದೆ.
ನಿಗೂಢವಾಗಿ ಸಾವನ್ನಪ್ಪಿದ್ದ ಗುಲಾಬಿ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪತಿ ನಾಗೇಶ್ ನಿಧನದ ಬಳಿಕ ಮೀನು ಮಾರಾಟ ಮಾಡಿಕೊಂಡು, ಬಡ್ಡಿ ವ್ಯವಹಾರಗಳನ್ನು ನಡೆಸಿಕೊಂಡಿದ್ದ ಗುಲಾಬಿಯ ಇಬ್ಬರು ಮಕ್ಕಳಲ್ಲಿ ಓರ್ವ ವಿವಾಹಿತನಾಗಿದ್ದು, ಮುಂಬೈಯಲ್ಲಿಯೂ ಮತ್ತೋರ್ವ ಬೆಂಗಳೂರಿನಲ್ಲಿಯೂ ಇದ್ದಾರೆ. ಬಡ್ಡಿ ವ್ಯವಹಾರದಿಂದಾಗಿ ಹಲವಾರು ಜನ ಗುಲಾಬಿ ಜೊತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಮರಣೋತ್ತರ ಶವ ಪರೀಕ್ಷೆಯ ವರದಿಯಲ್ಲಿ ಕತ್ತು ಹಿಸುಕಿ ಕೊಲೆಯಾಗಿರುವುದು ದೃಢಪಟ್ಟಿದ್ದರಿಂದ ಪೊಲೀಸರು ಆಕೆಯ ಜೊತೆಗೆ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಸಿದ್ದು, ಕೊಲೆಯ ಓರ್ವ ಆರೋಪಿ ರವಿರಾಜ್ ಎಂದು ಗುರುತಿಸಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.