ಮಂಗಳೂರು,ಮಾ 09(MSP): ಕಳೆದ ಐದು ವರುಷದಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಇದರಲ್ಲಿ ಒಂದು ಉರಿ ದಾಳಿಗೆ ಪ್ರತಿಕಾರವಾಗಿ ನಡೆದರೆ ಮತ್ತೊಂದು ಬಾಲಾಕೋಟ್ ದಾಳಿ. ಆದರೆ ಭಾರತ ನಡೆಸಿದ ಮೂರನೆಯ ದಾಳಿ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅವರು ನಗರದಲ್ಲಿ ಮಾ.09 ರ ಶನಿವಾರ ಕೇಂದ್ರ ಮೈದಾನದಲ್ಲಿ , ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಬಿಜೆಪಿ ಕ್ಲಸ್ಟರ್ ಮಟ್ಟದ ಕಾರ್ಯಕರ್ತರ ಸಮಾವೇಶವಾದ ’ಶಕ್ತಿಕೇಂದ್ರ ಪ್ರಮುಖರ ಸಮಾವೇಶ’ ವನ್ನು ಉದ್ಘಾಟಿಸಿದ ಮಾತನಾಡಿದರು.
ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಮತ್ತು ಭಾರತದ ನೆಲವನ್ನು ಅತಿಕ್ರಮಿಸುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಮೂಲಕ, ನಾವು ಯಾರ ತಂಟೆಗೂ ಹೋಗಲ್ಲ, ನಮ್ಮ ತಂಟೆಗೆ ಬಂದರೆ ಬಿಡಲಾರೆ ಎನ್ನುವ ಪ್ರಬಲ ಸಂದೇಶ ನೀಡಿದ್ದೇವೆ ಎಂದು ಭಯೋತ್ಪಾದನೆಯ ವಿರುದ್ದ ಗುಡುಗಿದರು.
ಪುಲ್ವಾಮದಲ್ಲಿ ಹುತಾತ್ಮರಾದ ಸಿಆರ್’ಎಫ್ ಯೋಧರನಲ್ಲಿ ಕರ್ನಾಟಕದ ಯೋಧ ಗುರು ಕೂಡಾ ಒಬ್ಬರಾಗಿದ್ದಾರೆ. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಉಗ್ರರ ವಿರುದ್ದ ಆಪರೇಷನ್ ನಡೆಸಿದೆವು. ನಮ್ಮ ವಾಯುಸೇನೆಯೂ ಪಾಕ್ ನೆಲಕ್ಕೆ ಹೋಗಿ ಉಗ್ರರ ಹುಟ್ಟಡಗಿಸುವಂತೆ ದಾಳಿ ಮಾಡಿತು. ಈ ಮೂಲಕ ನಾವು ಉಗ್ರವಾದವನ್ನು ಬೆಂಬಲಿಸುವ ಪಾಕ್ ಗೆ ಸ್ಪಷ್ಟವಾದ ಸಂದೇಶ ರವಾನಿಸಿದ್ದೇವೆ.ಆತಂಕವಾದವು ನಮ್ಮ ಮಾನ ಮತ್ತು ಸ್ವಾಭಿಮಾನಕ್ಕೆ ಸವಾಲಾಗಿದೆ. ಇದನ್ನು ಬುಡ ಸಮೇತ ಕಿತ್ತೊಗೆಯುವುದೇ ನಮ್ಮ ಉದ್ದೇಶ. ವಿಪರ್ಯಾಸವೆಂದರೆ ಬಾಲಾಕೋಟ್ ದಾಳಿ ಬಗ್ಗೆ ವಿಪಕ್ಷಗಳು ವ್ಯಂಗ್ಯವಾಡುತ್ತವೆ. ವಾಯುಸೇನೆ ನಡೆಸಿದ ದಾಳಿಯಲ್ಲಿ ಎಷ್ಟು ಉಗ್ರರು ಸತ್ತರೆಂದು ಲೆಕ್ಕಚಾರ ಕೇಳುತ್ತಾರೆ.ನಮ್ಮ ಸೇನೆ ಮತ್ತು ನಮ್ಮ ಸೇನಾನಿಗಳ ಪರಾಕ್ರಮದ ಬಗ್ಗೆ ಪ್ರತಿಪಕ್ಷಗಳಿಗೆ ಅನುಮಾನವಿದೆ. ಭಾರತೀಯ ಸೇನೆಯ ಮಿಗ್ 21 ಯುದ್ದವಿಮಾನ ಪಾಕ್ ಎಫ್ 16 ವಿಮಾನವನ್ನು ಉರುಳಿಸುವ ಮೂಲಕ ಪರಾಕ್ರಮ ಮೆರೆದಿದೆ. ಉಗ್ರವಾದಿಗಳನ್ನು ಒಸಾಮಾ ಜೀ, ಹಫೀಝ್ ಜೀ ಎಂದು ಕಾಂಗ್ರೆಸ್ ನಾಯಕರು ಕರೆಯುತ್ತಾ ಸತ್ತ ಉಗ್ರರ ಲೆಕ್ಕ ಕೇಳುವ ಪತ್ರಿಪಕ್ಷಗಳು, ವೀರಸೈನಿಕರ ಹೆಣವನ್ನು ಲೆಕ್ಕ ಹಾಕಲಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದಾಗ 56 ಇಂಚಿನಎದೆಗಾರಿಕೆ ಎಲ್ಲಿ ಹೋಯ್ತು ಎಂದು ಪ್ರತಿಪಕ್ಷಗಳು ವ್ಯಂಗ್ಯವಾಡುತ್ತಿದ್ದವು.ಆದರೆ ಉಗ್ರ ದಾಳಿಗೆ ಪ್ರತ್ಯುತ್ತರ ನೀಡಿದ ಮೋದಿ ಅವರ ಎದೆಗಾರಿಕೆ 56 ಇಂಚು ಹೋಗಿ , 65 ಇಂಚು ಆಗಿ ಬದಲಾಗಿದೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.