ಬೈಂದೂರು,ಮಾ.09(AZM):ಬೈಂದೂರಿನ ರಾಷ್ಟೀಯ ಹೆದ್ದಾರಿ ಸಮೀಪದಲ್ಲಿ ಅಮಾನವೀಯ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವನ ಕಾಲಿಗೆ ಸರಪಳಿಯಿಂದ ಸುತ್ತಿ ಬೀಗ ಜಡಿದು ಮರಕ್ಕೆ ಕಟ್ಟಿ ಹಾಕಲಾಗಿದ್ದು, ಆ ಕಡೆಯಿಂದ ಹೋಗುತ್ತಿದ್ದ ವಾಹನ ಸವಾರರು ನೋಡಿ ಬೈಂದೂರು ಠಾಣೆಗೆ ಇಂದು ಮಾಹಿತಿ ನೀಡಿದ್ದಾರೆ.
ವ್ಯಕ್ತಿಯನ್ನು ಕೇರಳದ ಕಲ್ಲಿಕೋಟೆ ನಿವಾಸಿ ಸಯ್ಯದ್(50) ಎಂದು ಗುರುತಿಸಲಾಗಿದ್ದು,ಘಟನೆ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಸಯ್ಯದ್ ಎಂಬವರನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಬೀಗ ಹಾಕಿದ್ದರಿಂದ ವ್ಯಕ್ತಿಯನ್ನು ಬಿಡಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಗಿಡವನ್ನು ಮುರಿದು ಸರಪಳಿ ಸಮೇತವಾಗಿ ವ್ಯಕ್ತಿಯನ್ನು ಪೊಲೀಸ್ ಜೀಪಿನಲ್ಲಿ ಕೂರಿಸಿ ಸಮೀಪದ ವರ್ಕ್ ಶಾಪ್ ಗೆ ಕರೆದುಕೊಂಡು ಹೋಗಿ ವ್ಯಕ್ತಿಯನ್ನು ಸರಪಳಿಯ ಬಂಧನದಿಂದ ಮುಕ್ತಿಗೊಳಿಸಿದ್ದಾರೆ.
ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಮಲೆಯಾಳಂ ಭಾಷೆಯಲ್ಲೇ ವಿಚಾರಣೆ ನಡೆಸಿದ ವೇಳೆ ವ್ಯಕ್ತಿ ಕೇರಳದ ಕಲ್ಲಿಕೋಟೆಯ ನಿವಾಸಿ ಸಯ್ಯದ್(50) ಎಂದು ತಿಳಿದುಬಂದಿದ್ದು, ಬೈಂದೂರು ಪೊಲೀಸರು ಕೇರಳ ಪೊಲೀಸರ ನೆರವು ಕೋರಿ ಸಯ್ಯದ್ ಅವರನ್ನು ಮನೆಗೆ ವಾಪಾಸು ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಯ್ಯದ್ ಎಂಬವರು ಮಾನಸಿಕ ಅಸ್ವಸ್ಥಹೊಂದಿರುವವರಾಗಿರಬಹುದು ಎಂದು ಶಂಕಿಸಲಾಗಿದೆ. ಕೆಲವು ದಿನಗಳಿಂದ ಸಯ್ಯದ್ ಅವರು ಕಿರಿಮಂಜೇಶ್ವರ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ ಎನ್ನಲಾಗಿದೆ.