ಪುತ್ತೂರು, ಮಾ 11 (MSP): ಇಲ್ಲಿನ ಕೆದಂಬಾಡಿ ಗ್ರಾಮದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕ್ಕಿದ್ದು, ಇದೀಗ ಆಕೆಯ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ತಂದೆ, ಅಸ್ಸಾಂನ ಅಖ್ತರ್ ಹುಸೇನ್ ಎಂಬಾತನ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.
ಕೆದಂಬಾಡಿ ಗ್ರಾಮದ ನಿಡ್ಯಾಣ ಪಿದಪಟ್ಲ ನಿವಾಸಿ ಭಾಸ್ಕರ ಪೂಜಾರಿ ಎಂಬುವವರ ಮಗಳು ಋತಿಕಾ (17) ನಾಪತ್ತೆಯಾಗಿರುವ ವಿದ್ಯಾರ್ಥಿನಿ. ಈಕೆ ಕೆಯ್ಯೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು.
ದ್ವಿತೀಯ ಪಿಯುಸಿಯ ಎರಡು ವಿಷಯಗಳ ಪರೀಕ್ಷೆ ಬರೆದಿದ್ದ ಋತಿಕಾ, ಮುಂದಿನ ಪರೀಕ್ಷೆಯ ತಯಾರಿಗೆಂದು ಗುಂಪು ಅಧ್ಯಯನಕ್ಕಾಗಿ ಸಹಪಾಠಿಯ ಮನೆಗೆ ಮಾ.08 ಶುಕ್ರವಾರ ಬೆಳಿಗ್ಗೆ ಹೋಗಿದ್ದಳು. ಆದ್ರೆ ಅನಂತರ ಆಕೆ ಮನೆಗೆ ಹಿಂತಿರುಗಿಲ್ಲ. ಮನೆಯಿಂದ ಹೋಗುವಾಗ ತನ್ನ ಮೊಬೈಲ್ ಸಿಮ್ ಕಾರ್ಡ್ ಅನ್ನು ತೆಗೆದಿರಿಸಿ, ತಾಯಿಯ ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾಳೆ. ಶುಕ್ರವಾರ ಮಧ್ಯಾಹ್ನ ಬೆಳ್ಳಾರೆ ರಸ್ತೆಯ ಕಟ್ಟತ್ತಾರು ಎಂಬಲ್ಲಿ ಬಸ್ ಹತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಋತಿಕಾ ತಂದೆ ಭಾಸ್ಕರ ಪೂಜಾರಿ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು ಅಸ್ಸಾಂನ ಹಲವು ಕಾರ್ಮಿಕರು ಅವರಿಗೆ ಸಹಾಯಕರಾಗಿದ್ದಾರೆ. ಈ ಕಾರ್ಮಿಕರು ಆಗಾಗ ಭಾಸ್ಕರ ಅವರ ಮನೆಗೆ ಬರುತ್ತಿದ್ದರು. ಕೆಲವೊಮ್ಮೆ ಅಲ್ಲಿಯೇ ರಾತ್ರಿ ಉಳಿದುಕೊಳ್ಳುತ್ತಿದ್ದರು. ಈ ಪೈಕಿ ಅಖ್ತರ್ ಹುಸೇನ್ ಜೊತೆ ಋತಿಕಾ ಸಲುಗೆಯಿಂದ ಇದ್ದಳು ಎನ್ನಲಾಗಿದೆ. ಇದಲ್ಲದೆ ಆಕೆಯ ಕಾಲೇಜು ಬ್ಯಾಗ್ನಲ್ಲಿ ಆತನ ಭಾವಚಿತ್ರಗಳು ಪತ್ತೆಯಾಗಿವೆ.
ಋತಿಕಾಳನ್ನು ಮದುವೆ ಆಗುವುದಾಗಿ ನಂಬಿಸಿ ಅಖ್ತರ್ ಹುಸೇನ್ ಕರೆದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಹಲವು ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಇಬ್ಬರ ಪತ್ತೆಗಾಗಿ ಶೋಧ ಮುಂದುವರಿದಿದೆ.ವಿದ್ಯಾರ್ಥಿನಿ ಮತ್ತು ಗಾರೆ ಕೆಲಸದ ಕಾರ್ಮಿಕ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರಿಗೆ ಗೊತ್ತಾಗದಂತೆ ಜೊತೆಯಾಗಿ ಹೋಗಿರುವ ಅನುಮಾನ ವ್ಯಕ್ತವಾಗಿದೆ.