ಬಂಟ್ವಾಳ,ಮಾ 11 (MSP): ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಬಿ.ಸಿ. ರೋಡ್ ನಲ್ಲಿ ಹಾಕಲಾಗಿದ್ದ ಬ್ಯಾನರ್ ಗಳನ್ನು ಪುರಸಭಾ ಅಧಿಕಾರಿಗಳು ಮಾ.11ರ ಸೋಮವಾರ ಮುಂಜಾನೆ ತೆರವುಗೊಳಿಸಿದ್ದಾರೆ.
ಲೋಕಸಭಾ ಚುನಾವಣಾ ನೀತಿ ಸಂಹಿತೆಯ ಜಾರಿಯಾಗಿರುವುದರಿಂದ ನೀತಿಸಂಹಿತೆಗೆ ತೊಡಕಾಗುತ್ತದೆ ಎಂದು ನೆಪವೊಡ್ಡಿ ಪೊಳಲಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಾಕಲಾಗಿದ್ದ ಬ್ಯಾನರ್'ಗಳ ತೆರವುಗೊಳಿಸಿದ್ದಾರೆ. ಆದರೆ ಇದನ್ನು ವಿರೋಧಿಸಿದ ಸಾರ್ವಜನಿಕರು ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬ್ಯಾನರ್ ಗಳನ್ನು ತೆರವುಗೊಳಿಸುವ ಸಂದರ್ಭ ಸಾರ್ವಜನಿಕರ ಹಾಗೂ ಪುರಸಭಾ ಅಧಿಕಾರಿಗಳ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.
ಯಾವುದೇ ರಾಜಕೀಯ ಪ್ರಚಾರದ ಉದ್ದೇಶದಿಂದ ನಾವು ಬ್ಯಾನರ್ ಅಳವಡಿಸಿಲ್ಲ, ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಭಕ್ತಿಯ ನೆಲೆಯಾದ ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಇಲ್ಲಿ ಬ್ಯಾನರ್'ಗಳನ್ನು ಹಾಕಲಾಗಿದೆ. ಅಲ್ಲದೆ ಇನ್ನು ಮೂರು ದಿನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವೂ ಮುಗಿಯುತ್ತದೆ. ಹೀಗಾಗಿ ಬ್ಯಾನರ್ ತೆರವು ಮಾಡಬಾರದು ಎಂದು ನೆರೆದಿದ್ದ ಜನರು ಪುರಸಭಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪುರಸಭಾ ಸಿಬ್ಬಂದಿಗಳು ಹಾಗೂ ನೆರೆದಿದ್ದ ಜನಸಮೂಹದ ಮಧ್ಯೆ ಮಾತಿನ ಚಕಮಕಿ ನಡೆದಾಗ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಕಾನೂನು ಸ್ಯುವ್ಯಸ್ಥೆಗೆ ತೊಂದರೆ ಅಗದಂತೆ ಎಚ್ಚರ ವಹಿಸಿದ್ದರು.ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ದೂರವಾಣಿ ಮೂಲಕ ಸಂಪರ್ಕಿಸಿದ್ದು ಇದೀಗ ತಾತ್ಕಾಲಿಕವಾಗಿ ಬ್ಯಾನರ್ ತೆರವು ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.