ಮಂಗಳೂರು,ಮಾ.10(AZM):ಆಧಾರ್ ಅನ್ನೋದು ದೇಶದಲ್ಲಿ ಹೆಚ್ಚು ಚರ್ಚಿತಗೊಂಡಿರುವ ವಸ್ತು. ಆಧಾರ್ ಇಲ್ಲದೆ ಈ ದೇಶದಲ್ಲಿ ಜೀವಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಅಂದು ಸರತಿ ಸಾಲಿನಲ್ಲಿ ನಿಂತು ಆಧಾರ್ ಮಾಡಿಸಿದ ದೇಶದ ಜನರು ಇದೀಗ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರೋಕೆ ಶುರು ಮಾಡಿದ್ದಾರೆ.
ಹೌದು, ಕೆಲ ವರ್ಷಗಳ ಹಿಂದೆ ಕೇಂದ್ರ ಸರಕಾರ ಆಧಾರ್ ಯೋಜನೆಯನ್ನು ಜಾರಿಗೆ ತಂದಿತ್ತು. ಯಾವಾಗ ಈ ಯೋಜನೆ ಕಡ್ಡಾಯವಾಯ್ತೋ ಅವತ್ತಿನಿಂದ ದೇಶದ ಜನರು ನರಕ ಯಾತನೆ ಅನುಭವಿಸುವಿಸುತ್ತಿದ್ದಾರೆ. ಯಾಕಂದ್ರೆ ದೇಶದ ಪ್ರಜೆ ಎಂದು ಗುರುತಿಸಲು ಆಧಾರ್ ಕಾರ್ಡ್ ಯೋಜನೆಯೇ ಮೂಲ ಎಂದು ಸಾರಲಾಗಿತ್ತು. ಹೀಗಾಗಿ ಜನರು ರಾತ್ರಿ, ಹಗಲು ಮಳೆ, ಬಿಸಿಲೆನ್ನದೇ ಆಧಾರ್ ಕೇಂದ್ರದ ಮುಂದೆ ಕ್ಯೂ ನಿಂತು ಈ ಆಧಾರ್ ಕಾರ್ಡ್ ಅನ್ನು ಮಾಡಿಸಿದ್ದಾರೆ. ಆದರೆ ಈ ವೇಳೆ ಆದ ಯಡವಟ್ಟು ಅಷ್ಟಿಷ್ಟಲ್ಲ. ಇದೀಗ ಮತ್ತೆ ಜನರು ಆಧಾರ್ ತಿದ್ದುಪಡಿಗಾಗಿ ಬೀದಿ ಬೀದಿ ಸುತ್ತುವ ಪರಿಸ್ಥಿತಿ ಎದುರಾಗಿದೆ.
ಆಧಾರ್ ಕಾರ್ಡ್ ಮಾಡಿಸಲು ಜನರಿಗಾಗಿ ಸರಕಾರ ಕೆಲವು ಆಧಾರ್ ಕೇಂದ್ರಗಳನ್ನು ತೆರೆದಿದೆ. ಆದರೆ ಈ ಕೇಂದ್ರದಲ್ಲಿ ಜನರು ಆಧಾರ್ ನಲ್ಲಿದ್ದ ಎಲ್ಲಾ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ನಲ್ಲಿರೋ ಜನ್ಮ ದಿನಾಂಕದಲ್ಲಿ ಎರಡು ವರ್ಷಗಳ ಕೆಳಗಿನ ತಿದ್ದುಪಡಿ ಇದ್ದಲ್ಲಿ ನೀವು ನಿಮ್ಮ ಊರಿನ ಆಧಾರ್ ಕೇಂದ್ರದಲ್ಲೇ ತಿದ್ದುಪಡಿ ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚಿನ ತಿದ್ದುಪಡಿ ಇದ್ದಲ್ಲಿ ಬೆಂಗಳೂರಲ್ಲಿರುವ ಮುಖ್ಯ ಆಧಾರ್ ಕೇಂದ್ರಕ್ಕೆ ಹೋಗಬೇಕಾಗಿ ಬರುತ್ತದೆ. ಇದರಿಂದ ಬಡವರು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ತಿರುಗಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕೆಲವು ಸಾಮಾಜಿಕ ಹೋರಾಟಗಾರರು ದೂರುತ್ತಿದ್ದಾರೆ.
ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಈ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.
ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರಲಿ ಆದರೆ ಆ ಯೋಜನೆಗಳು ಜನರಿಗೆ ಸಮಸ್ಯೆಯಾಗಬಾರದು. ಬೀದಿ ಸುತ್ತುವಂತೆ ಮಾಡಿರೋ ಆಧಾರ್ ನಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗಿದೆ.