ಮಂಗಳೂರು,ಮಾ,11(AZM):ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪವನ್ನು ಮಾಜಿ ಸಚಿವರಾದ ರಮಾನಾಥ ರೈಯವರು ಎದುರಿಸುತ್ತಿದ್ದರೂ, ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿಯಾಗುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜನರಿಗೆ ಹಣವನ್ನು ಹಂಚುವ ಉದ್ದೇಶದಿಂದ,62 ಲಕ್ಷ ರೂ ಹಣವನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಮಾಜಿ ಸಚಿವರಾದ ಬಿ.ರಮಾನಾಥ ರೈ ಸೇರಿದಂತೆ ಆರು ಮಂದಿ ವಿರುದ್ಧ ಇತ್ತೀಚೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
‘ಆದಾಯ ತೆರಿಗೆ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡ ನಗದಿಗೆ ಸಂಬಂಧಿಸಿದಂತೆ ವರದಿ ನೀಡಿದ್ದರು. ಅದರ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಆದರೆ ಈ ಪ್ರಕರಣವು ರಮನಾಥ ರೈಯವರು, ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅಡ್ಡಿಯಾಗುವುದಿಲ್ಲ’ ಎಂದರು.
ರಮಾನಾಥ ರೈ ಅವರು ಚುನಾವಣೆಗೆ ಸ್ಪರ್ಧಿಸಿದರೆ ನಾಮಪತ್ರದ ಜೊತೆಗಿನ ಪ್ರಮಾಣಪತ್ರದಲ್ಲಿ ಈ ಪ್ರಕರಣದ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ವಿಚಾರಣೆ ಮುಗಿದು ಅಪರಾಧ ಸಾಬೀತಾದರೆ ಮಾತ್ರವೇ ಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಾಗಬಹುದು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿದರು.