ಕುಂದಾಪುರ, ಮಾ 11(SM): ಹೆಮ್ಮಾಡಿಯ ಗುಲಾಬಿ ಕೊಲೆ ಪ್ರಕರಣದ ಆರೋಪಿಯನ್ನು ಸೋಮವಾರ ಸ್ಥಳ ಮಹಜರಿಗೆ ಕರೆತಂದ ವೇಳೆಯಲ್ಲಿ ರೊಚ್ಚಿಗೆದ್ದ ಗುಲಾಬಿ ಮನೆಯವರು ಆರೋಪಿಯ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಮುದೂರು ನಿವಾಸಿ ರವಿರಾಜ್ ಪ್ರಕರಣ ಆರೋಪಿಯಾಗಿದ್ದು, ಚಿನ್ನಾಭರಣಕ್ಕಾಗಿ ಗುಲಾಬಿಯವರನ್ನು ಕೊಲೆಗೈದಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಆರೋಪಿ ರವಿ ವಿಜಯ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯ ಪತಿಯಾಗಿದ್ದು, ಗೇರುಬೀಜ ಕಾರ್ಖಾನೆಯ ಸಿಬ್ಬಂದಿಗಳಿಗೆ ಕೊಡಲಾಗಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆರೋಪಿ ರವಿರಾಜ್ಗೆ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರ ಇದ್ದಾನೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಘಟನಾ ಸ್ಥಳವಾದ ಗುಲಾಬಿ ವಾಸಿಸುತ್ತಿದ್ದ ಹರೆಗೋಡು ಸಮೀಪವಿರುವ ಮನೆಗೆ ಆರೋಪಿ ರವಿರಾಜ್ನನ್ನು ಕರೆತಂದಿದ್ದರು. ಸ್ಥಳ ಮಹಜರು ನಡೆಸಿ ಅಲ್ಲೇ ಸಮೀಪವಿರುವ ರವಿರಾಜ್ ಮನೆಗೂ ಕರೆತಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಯನ್ನು ತನಿಖಾಧಿಕಾರಿ ಸಿಪಿಐ ಮಂಜಪ್ಪ ಠಾಣೆಗೆ ಕರೆದೊಯ್ದರು.
ಆರೋಪಿಯನ್ನು ಸ್ಥಳ ಮಹಜರಿಗೆ ಕರೆತರುವ ವೇಳೆಯಲ್ಲಿ ಸಾರ್ವಜನಿಕರು ಆರೋಪಿಯನ್ನು ನೋಡಲು ಮುಗಿಬಿದ್ದಿದ್ದು, ಗುಲಾಬಿ ಕುಟುಂಬಿಕರು ಕೂಡ ಸ್ಥಳದಲ್ಲಿ ಜಮಾಯಿಸಿದ್ದರು. ಆರೋಪಿ ರವಿರಾಜ್ನನ್ನು ಕರೆದೊಯ್ದ ಬಳಿಕ ಅಲ್ಲೇ ಸೇರಿದ್ದ ಗುಲಾಬಿ ಮನೆಯವರು ಮನೆಯ ಪಡಸಾಲೆಯಲ್ಲಿ ನಿಂತಿದ್ದ ಆರೋಪಿ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ಸ್ಥಳೀಯರು ತಪ್ಪಿಸುವ ಪ್ರಯತ್ನ ನಡೆಸಿದ್ದು, ಕೆಲಕಾಲ ಉದ್ವಿಘ್ನ ಸ್ಥಿತಿ ನಿರ್ಮಾಣವಾಯಿತು. ಅಲ್ಲೇ ದೂರದಲ್ಲಿ ನಿಂತಿದ್ದ ಪೊಲೀಸರ ತಂಡ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಹರೆಗೋಡು ಸಮೀಪದ ವಿಜಯ ಗೇರುಬೀಜ ಕಾರ್ಖಾನೆ ಸಮೀಪದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಗುಲಾಬಿ ಫೆಬ್ರವರಿ 28ರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದು, ಮಾರ್ಚ್ 1ರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಗುಲಾಬಿ ಧರಿಸಿದ್ದ ಚಿನ್ನಾಭರಣಗಳು ಇಲ್ಲದ ಕಾರಣ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದರಿಂದ ಪೊಲೀಸರು ಹೆಚ್ಚಿನ ತನಿಖೆಗಾಗಿ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು. ನಾಲ್ಕು ದಿನಗಳ ಬಳಿಕ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು, ಗುಲಾಬಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಲಾಗಿರುವ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.