ಮಂಗಳೂರು, ಮಾ 11(SM): ಲೋಕಸಭೆ ಮಹಾ ಸಮರಕ್ಕೆ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲೇ ನೀತಿ ಸಂಹಿತೆ ಕೂಡ ಜಾರಿಗೊಂಡಿದೆ. ಆದರೆ, ಯಾವ ಕಾರ್ಯಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂಬ ಬಗ್ಗೆ ಜನತೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಜನ ಸಾಮಾನ್ಯರ ಗೊಂದಲಗಳಿಗೆ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಗಳು ತೆರೆ ಎಳೆದಿದ್ದಾರೆ.
ಚುನಾವಣಾ ನೀತಿ ಸಂಹಿತೆಯಿಂದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಖಾಸಗಿ ಕಾರ್ಯಕ್ರಮಗಳಿಗೆ ಮತ್ತು ರಾಜಕೀಯಕ್ಕೆ ಯಾವುದೇ ಸಂಬಂಧ ಇಲ್ಲ. ಆದರೆ, ದೊಡ್ಡ ಸಂಖ್ಯೆಯಲ್ಲಿ ಜನಸ್ತೋಮವನ್ನು ಸೇರಿಸಿಕೊಂಡು ಔತನ ಕೂಟ ಆಯೋಜನೆ ಮಾಡುವಂತಹ ಸಂದರ್ಭದಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳು ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಇನ್ನು ಈ ಸಮಾರಂಭಗಳಿಗೆ ರಾಜಕೀಯ ಮುಖಂಡರನ್ನು ಆಹ್ವಾನಿಸಿದ್ದಲ್ಲಿ ಇಲಾಖೆಗಳಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಸಮಾರಂಭದಲ್ಲಿ ಮುಖಂಡರು ಭೋಜನ ಹಂಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಯೋಗ ಈ ರೀತಿ ನಿಗಾ ಇರಿಸಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು ಮದುವೆ ಸಮಾರಂಭಕ್ಕೆ ಯಾವುದೇ ಅಡ್ಡಿ ಇಲ್ಲ ಎಂಬುವುದಾಗಿ ತಿಳಿಸಿದ್ದಾರೆ.
ಇನ್ನು ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನೀತಿ ಸಂಹಿತೆ ಜಾರಿಯಾಗಲಿದೆ. ಪಬ್ಲಿಕ್ ಪ್ರಾಪರ್ಟಿಯಲ್ಲಿ ಹಾಕಿರುವ ಎಲ್ಲಾ ಬ್ಯಾನರ್, ಫ್ಲೆಕ್ಸ್ ಗಳನ್ನು ಈಗಾಗಲೇ ತೆರವು ಮಾಡಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸುವ ರಾಜಕೀಯ ಬ್ಯಾನರ್ ಗಳ ಜತೆಗೆ ಧಾರ್ಮಿಕ ಹಾಗೂ ಇನ್ನಿತರ ಬ್ಯಾನರ್ ಗಳನ್ನು ತೆರವುಗೊಳಿಸಲು ಚುನಾವಣಾ ಆಯೋಗದ ಆದೇಶವಿದೆ.
ಒಂದೊಮ್ಮೆ ಪ್ರೈವೇಟ್ ಪ್ರಾಪರ್ಟಿಯಲ್ಲಿ ರಾಜಕೀಯ ಬ್ಯಾನರ್ ಗಳನ್ನು ಹಾಕಿದ್ದಲ್ಲಿ ಅವುಗಳ ಮೇಲೆ ಚುನಾವಣಾ ಆಯೋಗ ನಿಗಾ ಇರಿಸಲಿದೆ. ಹಾಗೂ ಅದರ ಖರ್ಚುವೆಚ್ಚದ ಕುರಿತು ಆಯೋಗ ನಿಗಾವಹಿಸಲಿದೆ. ಇನ್ನು ಖಾಸಗಿ ಜಾಗದಲ್ಲಿ ಬ್ಯಾನರ್ ಅಳವಡಿಕೆಗೆ ಸ್ಥಳೀಯಾಡಳಿತದ ಅನುಮತಿ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಕಲೆ, ಸಂಸ್ಕೃತಿಯ ಪ್ರಕಾರಗಳ ಪ್ರದರ್ಶನಕ್ಕೂ ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಕಲಾ ಪ್ರದರ್ಶನ ನಡೆಸುವಂತಹ ಸಂದರ್ಭ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ. ಯಕ್ಷಗಾನ, ಇತರೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಂತಹ ಕಲಾ ಪ್ರದರ್ಶನಗಳನ್ನು ರಾಜಕೀಯ ನಾಯಕರು ಪೋಷಕರಾಗಿ ನಡೆಸುವ ಸಾಧ್ಯತೆ ಇರುವುದರಿಂದ ಆಯೋಗ ಇವುಗಳ ಮೇಲೆ ಕೂಡ ನಿಗಾ ವಹಿಸಿಕೊಂಡಿದೆ.
ಇನ್ನು ಚುನಾವಣಾ ನೀತಿ ಸಂಹಿತೆಯ ಪ್ರಕಾರ ಅಭ್ಯರ್ಥಿಗಳ ಪ್ರಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಟ್ವಿಟರ್, ಫೇಸ್ಬುಕ್, ಗೂಗಲ್, ಶೇರ್ ಚಾಟ್ ಇವುಗಳ ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಲಾಗುತ್ತಿದೆ. ಸ್ಪಷ್ಟ ಎಚ್ಚರಿಕೆಯನ್ನು ನೀಡಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಚುನಾವಣಾ ಆಯೋಗದ ನಿರ್ದೇಶನದಂತೆ ಅಭ್ಯರ್ಥಿ ಪರ ವೈಯಕ್ತಿಕವಾಗಿ ನಡೆಸಲಾಗುವ ಪ್ರಚಾರದ ಮೇಲೂ ಚುನಾವಣಾ ಆಯೋಗ ಕಣ್ಣಿರಿಸಲಿದೆ ಎಂದರು.
ಚುನಾವಣಾ ನೀತಿ ಸಂಹಿತೆಯಡಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಅನ್ವಯವಾಗುವ ಷರತ್ತು, ಕಾನೂನು ಸಾಮಾಜಿಕ ಜಾಲತಾಣಗಳಿಗೂ ಅನ್ವಯವಾಗಲಿದೆ. ಹಾಗಾಗಿ ಅಭ್ಯರ್ಥಿ ಪರ ನಡೆಸಲಾಗುವ ಪ್ರಚಾರಕ್ಕೆ ನೇರವಾಗಿ ಅಭ್ಯರ್ಥಿ ಹೊಣೆಯಾಗುತ್ತಾರೆ. ಆ ಪ್ರಚಾರದ ಖರ್ಚು ವೆಚ್ಚವೂ ಸಂಬಂಧಪಟ್ಟ ಅಭ್ಯರ್ಥಿಯ ಖಾತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ಬಗ್ಗೆ ಗಮನಹರಿಸಬೇಕು.
ಯಾವನೇ ವ್ಯಕ್ತಿ ಯಾವುದೇ ವ್ಯಕ್ತಿಯ ಪರ ಪ್ರಚಾರ ಮಾಡಿ ಸಂದೇಶಗಳನ್ನು ರವಾನಿಸಿದಾಗ ಅದು ತನಗೆ ಗೊತ್ತಿಲ್ಲ, ನನ್ನ ಅರಿವಿಗೆ ಬಾರದೆ ಪ್ರಚಾರ ಮಾಡಿದ್ದಾರೆಂಬ ಹೇಳಿಕೆಯನ್ನು ಅಭ್ಯರ್ಥಿ ನೀಡಿದ್ದಲ್ಲಿ ಪ್ರಚಾರ ಮಾಡಿದವರೇ ಕಾನೂನಿನಡಿ ಅಪರಾಧಿಗಳಾಗುತ್ತಾರೆ. ಹಾಗಾಗಿ ಅಭ್ಯರ್ಥಿಯ ಅನುಮತಿ ಇಲ್ಲದೆ ವೈಯಕ್ತಿಕವಾಗಿಯೂ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಚುನಾವಣಾ ನೀತಿ ಸಂಹಿತೆಯಡಿ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.