ಕುಂದಾಪುರ, ಮಾ 12(SM): ಹೆಮ್ಮಾಡಿಯ ಗುಲಾಬಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು ಆರೋಪಿಯಿಂದ ಸತ್ಯ ಬಾಯಿ ಬಿಡಿಸಿದ್ದಾರೆ. ಕೇವಲ ೫೦ ಸಾವಿರ ರೂಪಾಯಿ ಕೇಳಿದಾಗ ಕೊಡದೇ ಇದ್ದುದಕ್ಕೆ ಬಟ್ಟೆಯಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದಾಗಿ ಆರೋಪಿ ರವಿರಾಜ್ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಮುದೂರು ನಿವಾಸಿ ರವಿರಾಜ್ ಕೊಲೆ ಆರೋಪಿಯಾಗಿದ್ದು, ತಾನು ಕೃತ್ಯ ಮಾಡಿರುವುದು ಹಾಗೂ ಕೊಲೆಯ ಬಳಿಕ ಆಕೆಯ ಕುತ್ತಿಗೆಯಲ್ಲಿದ್ದ ಸರ, ಕಿವಿಯೋಲೆ, ಉಂಗರ ಕದ್ದು ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಚಿನ್ನಾಭರಣಕ್ಕಾಗಿ ಗುಲಾಬಿಯನ್ನು ಕೊಲೆಗೈದಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಘಟನೆಯ ವಿವರ:
ಆರೋಪಿ ರವಿ ವಿಜಯ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯ ಪತಿಯಾಗಿದ್ದು, ಗೇರುಬೀಜ ಕಾರ್ಖಾನೆಯ ಸಿಬ್ಬಂದಿಗಳಿಗೆ ಕೊಡಲಾಗಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಆರೋಪಿ ರವಿರಾಜ್ಗೆ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರ ಇದ್ದಾನೆ. ಚಾಲಕನಾಗಿದ್ದ ರವಿ ಈ ಹಿಂದೆ ಖಾಸಗಿ ಬಸ್ಗಳಲ್ಲಿ ಬಾಡಿಗೆ ಚಾಲಕನಾಗಿ ಹೋಗುತ್ತಿದ್ದ.
ಬಳಿಕ ಸ್ಥಳೀಯರೊಬ್ಬರ ಪಿಕ್ಅಪ್ ವಾಹನದಲ್ಲಿ ಚಾಲಕನಾಗಿದ್ದ. ರವಿರಾಜ್ ಕೆಲವರ ಕೈಯಿಂದ ಸಾಲ ಪಡೆದುಕೊಂಡಿದ್ದು, ಮಾರ್ಚ್ 2ರಂದು ಒಬ್ಬರಿಗೆ 50 ಸಾವಿರ ರೂಪಾಯಿ ಕೊಡಬೇಕಾಗಿತ್ತು ಎನ್ನಲಾಗಿದೆ. ಕೊಡದಿದ್ದರೆ ಮರ್ಯಾದೆ ಪ್ರಶ್ನೆ ಎಂದಾಗ ನೆನಪಾಗಿದ್ದು ಗುಲಾಬಿ. ಮಾರ್ಚ್ 1ರಂದು ಗುಲಾಬಿ ಮನೆಗೆ ಬಂದು 50 ಸಾವಿರ ರೂಪಾಯಿ ಬಡ್ಡಿಗೆ ಹಣ ಬೇಕೆಂದು ಕೇಳಿದ್ದು, ಗುಲಾಬಿ ಕೊಡಲು ಒಪ್ಪದಿರುವುದೇ ಕೊಲೆಗೆ ಕಾರಣ ಎನ್ನಲಾಗಿದೆ.
ಆರೋಪಿ ರವಿರಾಜ್ಗೆ ಹಣಕೊಡಲು ಆಗುವುದಿಲ್ಲ ಎಂದು ಗುಲಾಬಿ ಹೇಳಿದಾಗ ಹಣ ಕೊಡದೇ ಮನೆಗೆ ಹೋಗುವುದಿಲ್ಲ ಎಂದಿದ್ದ. ನಂತರ ಆತ ಮನೆಯ ಹೊರಗಡೆ ಬಂದಿದ್ದ. ಸ್ವಲ್ಪ ಸಮಯದ ಬಳಿಕ ಗುಲಾಬಿ ಬಹಿರ್ದೆಸೆಗೆಂದು ಹೊರಗಡೆ ಬಂದಾಗ ಆರೋಪಿ ರವಿ ಮನೆಯ ಹೊರಗಡೆ ಕುಳಿತಿರುವುದನ್ನು ಗಮನಿಸಿ ಮನೆಗೆ ಹೋಗುವಂತೆ ಜೋರು ಮಾಡಿದ್ದಾರೆ. ಆದರೆ ಆತ ಹೋಗಿರಲಿಲ್ಲ. ಆಗ ನಿನಗೆ ಹಣ ಕೊಡಬೇಕಾದರೆ ಶಿವರಾಮನ ಜೊತೆಗೆ ಮಾತಾಡಿ ಒಪ್ಪಿದರೆ ಕೊಡುವೆ ಎಂದಿದ್ದಾರೆ.
ಆದರೆ ಆರೋಪಿ ಇಂದೇ ಹಣ ನೀಡುವಂತೆ ಪೀಡಿಸಿದ್ದು, ಗುಲಾಬಿ ಒಪ್ಪಿರಲಿಲ್ಲ. ರಾತ್ರಿ ಮತ್ತೊಮ್ಮೆ ಬಹಿರ್ದೆಸೆಗೆ ಹೋಗಿ ವಾಪಾಸು ಬರುತ್ತಿದ್ದಾಗ ಆಕೆಯ ಹಿಂದೆಯೇ ಬಂದ ಆರೋಪಿ ರವಿರಾಜ್ ಶಾಲಿನಿಂದ ಆಕೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದು, ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬಳಿಕ ಸರ, ಕಿವಿಯೋಲೆ, ಉಂಗರು ಹಾಗೂ ಬಳೆಯನ್ನು ಕದ್ದು ಪರಾರಿಯಾಗಿದ್ದಾನೆ. ಆದರೆ ಆಕೆಯ ಕೈಯಲ್ಲಿದ್ದ ಬಳೆ ರೋಲ್ಡ್ ಗೋಲ್ಡ್ ಎನ್ನುವುದು ಬಳಿಕ ಗೊತ್ತಾಗಿದೆ.
ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಎಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ.ದಿನೇಶ್ಕುಮಾರ್ ಅವರು ವೃತ್ತ ನಿರೀಕ್ಷಕ ಮಂಜಪ್ಪ ವಿಶೇಷ ತಂಡ ರಚಿಸಿ ಸಿದ್ಧಾಪುರದಲ್ಲಿ ಆರೋಪಿ ಸೆಳ್ಕೋಡು ಕುಂಟುಮಾವು ಮನೆ ನಿವಾಸಿ ರವಿರಾಜ್ನ್ನು ಬಂಧಿಸಿದ್ದು, ಆರೋಪಿ ಬಳಸಿದ್ದ ಕಾರು, ಅಪಹರಿಸಿದ ಸರ, ಉಂಗುರ ಹಾಗೂ ಕಿವಿಯೋಲೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಒಂದು ವಾರದ ಕಾಲ ಪೊಲೀಸರ ಕಸ್ಟಡಿಗೆ ನೀಡಿ ಆದೇಶ ನೀಡಿದೆ.