ಕಾಸರಗೋಡು, ನ 3 : ಮರಳು ಸಾಗಾಟದ ಲಾರಿಯನ್ನು ಅಪಹರಿಸಿದ್ದು ಮಾತ್ರವಲ್ಲದೇ ಚಾಲಕನನನ್ನು ಬೆದರಿಸಿ 60 ಸಾವಿರ ರೂ. ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಲ್ಪಾಡಿ ಕೃಷ್ಣ ನಗರದ ಶ್ರೀಜಿತ್ (24) ಮತ್ತು ಕುಂಜತ್ತೂರು ಪದವಿನ ಅಶ್ವಿತ್ (24) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಜತ್ತೂರಿನ ಸಂದೇಶ್ ಮತ್ತು ಬೇಳ ಚೌಕಾರಿನ ಅಕ್ಷಯ್ ನನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಅಕ್ಷಯ್ ವಿರುದ್ಧ ಗೂಂಡಾ ಕಾಯ್ದೆ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
ಕರ್ನಾಟಕದಿಂದ ಮರಳು ಹೇರಿಕೊಂಡು ಕಾಸರಗೋಡಿಗೆ ಬರುತ್ತಿದ್ದ ಲಾರಿಯನ್ನು ನೀರ್ಚಾಲು ಎಂಬಲ್ಲಿನ ಒಳರಸ್ತೆಯಲ್ಲಿ ಬೈಕ್ ಗಳಲ್ಲಿ ಬಂದ ತಂಡವು ತಡೆದು ಬೆದರಿಸಿ ಲಾರಿಯನ್ನು ಬೇಳ ಕಾರ್ಗಿಲ್ ಎಂಬ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು 60 ಸಾವಿರ ರೂ. ನೀಡುವಂತೆ ಬೆದರಿಸಿತ್ತು.
ಲಾರಿ ಚಾಲಕ ನೀಡಿದ ಮಾಹಿತಿಯಂತೆ, ಲಾರಿಯ ಮಾಲಕ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿ ಬೇಳ ಕಾರ್ಗಿಲ್ ಎಂಬಲ್ಲಿಂದ ಲಾರಿಯನ್ನು ಪತ್ತೆ ಹಚ್ಚಲಾಗಿತ್ತು. ಪೊಲೀಸರನ್ನು ಕಂಡು ತಂಡವು ಪರಾರಿಯಾಗಿದ್ದು, ಬಳಿಕ ಕೆಲ ದಿನಗಳ ನಂತರ ಆರೋಪಿಗಳ ಮಾಹಿತಿ ಲಭ್ಯವಾಗಿತ್ತು.
ಶ್ರೀಜಿತ್ ವಿರುದ್ಧ ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಏಳು ಹೊಡೆದಾಟ ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ