ಮಂಗಳೂರು,ಮಾ 13(MSP): ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು, ವಿಧಾನ ಪರಿಷತ್ ಸದಸ್ಯ, ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಕಿಡಿಕಾರಿದ್ದಾರೆ.
ಅವರು ಮಾ.13ರ ಬುಧವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ , ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ ನಮ್ಮ ದೇಶದ ಸೈನಿಕರು ಉಗ್ರರ ಸದೆಬಡಿದಿದ್ದಾರೆ. ನಮ್ಮ ಯೋಧರ ಬಗ್ಗೆ ಕಾಂಗ್ರೆಸ್ ಗೆ ಅಪಾರ ಗೌರವವಿದೆ ಆದರೆ ಸಂಸದ ನಳಿನ್ ಕುಮಾರ್ ಕಟೀಲ್, ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ ಪಾಕ್ ನೆಲಕ್ಕೆ ಬಿಜೆಪಿಗರೇ ಬಾಂಬ್ ಹಾಕಿದ ಹಾಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನೀತಿಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 11 ರಂದು " ರಾತ್ರಿ 3 ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ನೀಡುವವರಿಗೆ ಮತ ಹಾಕಬೇಕೆ ಹೊರತು, ರಾತ್ರಿ 3 ಗಂಟೆಗೆ ಉಗ್ರರಿಗಾಗಿ ಸುಪ್ರೀಂಕೋರ್ಟ್ ಬಾಗಿಲು ತೆರೆಸುವವರಿಗಲ್ಲಾ " ಎಂದು ನಳಿನ್ ಟ್ವೀಟ್ ಮಾಡಿದ್ದರು. ಹೀಗಾಗಿ ಚುನಾವಣಾ ಆಯೋಗ ಸುಮೊಟೋ ಕೇಸು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಇದಲ್ಲದೆ ನಳಿನ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಚುನಾವಣೆ ಆಯೋಗಕ್ಕೆ ನಾನು ಈಗಾಗಲೇ ದೂರು ಸಲ್ಲಿಸಿರುವೆ ಎಂದು ಹೇಳಿದರು.
ನಿಜಕ್ಕೂ ಪುಲ್ವಾಮಾ ದಾಳಿಗೆ ನೇರವಾಗಿ ಕಾರಣರು ಯಾರು ? ಕೇಂದ್ರದ ಇಂಟೆಲಿಜೆನ್ಸಿ ವೈಫಲ್ಯದಿಂದ ನಮ್ಮ ಯೋಧರ ಬಲಿಯಾಗಿದೆ . ಇದಕ್ಕೆ ಕೇಂದ್ರ ಹೊಣೆ ಅಲ್ಲವೇ ? 44 ಸೈನಿಕರ ಕುಟುಂಬವನ್ನು ಬೀದಿಗೆ ತಂದ ಅಪಕೀರ್ತಿ ಮೋದಿಗೆ ಸಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಪಕ್ಷವು ಸದಾ ಸೈನಿಕರ, ದೇಶದ ಪರ ನಿಲ್ಲುತ್ತೆ ಎಂದು ಭರವಸೆ ನೀಡಿದರು.