ಮಲ್ಪೆ,ಮಾ 13(MSP): ಜೀವನಕ್ಕಾಗಿ ಮೀನುಗಾರಿಕೆಯನ್ನೇ ವೃತ್ತಿಯಾಗಿಸಿ, ಮೀನುಗಾರಿಕೆಗೆಂದು ಆಳ ಸಮುದ್ರಕ್ಕೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ 7 ಮಂದಿ ಹಾಗೂ ಬೋಟ್ ನಾಪತ್ತೆಯಾಗಿ 87 ದಿನ ಕಳೆದರೂ ಮೀನುಗಾರರನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನಲೆಯಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಗಳು ಏ.18 ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿವೆ.
ನಾಪತ್ತೆಯಾದ ಮನೆಮಂದಿಯ ಆಗಮನಕ್ಕಾಗಿ ಪ್ರತಿದಿನ ಕಣ್ಣೀರು ಸುರಿಸುತ್ತಿರುವ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ದಾಮೋದರ್ ಸಾಲ್ಯಾನ್ ಹಾಗೂ ಚಂದ್ರಶೇಖರ್ ಕೋಟ್ಯಾನ್ ಅವರ ಮನೆಯವರು, "ಮೀನುಗಾರರ ಕಣ್ಮರೆ ಪ್ರಕರಣವನ್ನು ಎರಡೂ ಸರಕಾರ ಕಡೆಗಣಿಸಿದೆ.ಹುಡುಕಾಟವನ್ನೇ ನಿಲ್ಲಿಸಿದೆ. ವರದಿ ನೀಡುತ್ತೇವೆ ಎನ್ನುವ ಅಧಿಕಾರಿಗಳು 3 ತಿಂಗಳೂ ಕಳೆದರೂ ತುಟಿಬಿಚ್ಚುತ್ತಿಲ್ಲ ನಮ್ಮನ್ನು ಕತ್ತಲಿನಲ್ಲಿ ಇಟ್ಟಂತೆ ನಮಗೆ ಭಾಸವಾಗುತ್ತಿದೆ, ನಮ್ಮ ನೋವು ನಮಗೆ ಮಾತ್ರ ಗೊತ್ತು ಈ ಬಾರಿಯ ಮತ ಚಲಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಣ್ಮರೆಯಾದ ಮೀನುಗಾರರಿಗೆ ಸಂಬಂಧಿಸಿ ಜನಪ್ರತಿನಿಧಿಗಳಿಗೆ ಬುದ್ದಿ ಕಲಿಸಲು ಇದು ಸೂಕ್ತ ಸಮಯ. ಕೇವಲ ಎರಡು ಕುಟುಂಬಗಳು ಚುನಾವಣಾ ಬಹಿಷ್ಕರಿಸುವುದರಿಂದ ಏನೂ ಪ್ರಯೋಜನ ಇಲ್ಲ . ಕರಾವಳಿಯ ಮೂರು ಜಿಲ್ಲೆಯ ಸಮಸ್ತ ಮೀನುಗಾರರು ಸಿಡಿದೆದ್ದು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬರಬೇಕು. ಇದರಿಂದ ನಮ್ಮನ್ನು ಆಳುವವರಿಗೆ ಬಿಸಿ ಮುಟ್ಟಿಸಲು ಸಾಧ್ಯ. ನೌಕಪಡೆ ತನ್ನ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ವರದಿಯನ್ನು ಬಹಿರಂಗಪಡಿಸುತ್ತಿಲ್ಲ. ಇದಕ್ಕಾಗಿ ಒಂದು ವಾರದ ಕೊಡುತ್ತಿದ್ದೇವೆ, ತತ ಕ್ಷಣ ವರದಿ ಒಪ್ಪಿಸಬೇಕು" ಎಂದು ಉತ್ತರಕನ್ನಡದ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಷನ್ ನ ಅಧ್ಯಕ್ಷ ಗಣಪತಿ ಮಾಂಗ್ರೆ ಆಗ್ರಹಿಸಿದ್ದಾರೆ.