ಉಡುಪಿ,ಮಾ 14 (MSP): ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ಪರ್ಯಾಯ ಅವಧಿಯ ಸಂಕಲ್ಪದಂತೆ ಸುವರ್ಣ ಗೋಪುರ ಯೋಜನೆಗೆ ಚಾಲನೆ ದೊರಕಿದೆ. ಶ್ರೀ ಕೃಷ್ಣ ಮಠದಲ್ಲಿ ದೇವರ ಪ್ರಾಂಗಣದ ಮೇಲ್ಚಾವಣಿಗೆ ಸುವರ್ಣಾಚ್ಚಾದನ ಮಾಡುವ "ಸುವರ್ಣ ಗೋಪುರ" ಯೋಜನೆಯ ಅನುಷ್ಟಾನಕ್ಕಾಗಿ ಶ್ರೀದೇವರಲ್ಲಿ ಅನುಜ್ಞೆ ಪಡಕೊಳ್ಳುವ ಸಲುವಾಗಿ ಧಾರ್ಮಿಕ ವಿಧಿವಿಧಾನಗಳಲ್ಲಿ ಶ್ರೀನರಸಿಂಹ ಮಂತ್ರ ಹೋಮ, ಶ್ರೀಕೃಷ್ಣ ಮಂತ್ರ ಹೋಮ,ಶ್ರೀವಿಷ್ಣುಗಾಯತ್ರಿ ಮಂತ್ರ ಹೋಮ,ಶ್ರೀತತ್ವ ಮಂತ್ರ ಹೋಮ ವಿದ್ವಾಂಸರುಗಳಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್,ಹೆರ್ಗ ವೇದವ್ಯಾಸ ಭಟ್,ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್,ರಾಮಮೂರ್ತಿ ಭಟ್ ಇವರ ನೇತೃತ್ವದಲ್ಲಿ ಮಾ.14 ರ ಬುಧವಾರದಂದು ನಡೆಯಿತು.
ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು,ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ವೃಷಭ (ಬಸವ)ದಿಂದ ಎಳೆಯಲ್ಪಟ್ಟು ಸುಪಿಕಾವರೋಹಣ ನಡೆಯಿತು.
ಮಧ್ಯಾಹ್ನ 12.20ರ ಆಭಿಜಿತ್ ಸುಮುಹೂರ್ತದಲ್ಲಿಶ್ರೀಕೃಷ್ಣನ ಗರ್ಭಗುಡಿಯ ಸದ್ಯದ ಛಾವಣಿಯನ್ನು ಬಿಚ್ಚವ ಕೆಲಸವು ಪ್ರಾರಂಭವಾಯಿತು. ಸದ್ಯ ಶಿಥಿಲವಾದ ತಾಮ್ರ ತಗಡನ್ನು ತೆಗೆದು, ಅದಕ್ಕೆ ಹೊಸ ತಾಮ್ರ, ಬೆಳ್ಳಿ ಹಾಗೂ ಚಿನ್ನದ ತಗಡಿನ ಹೊದಿಕೆನ್ನು ಹಾಕುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಈ ಕೆಲಸದಿಂದ ಕೃಷ್ಣನ ದರ್ಶನಕ್ಕೆ ಯಾವುದೇ ತೊಂದರೆಗಳು ಇಲ್ಲ. ಮಧ್ಯಾಹ್ನ ದವರೆಗೆ ನಡೆಯುವ ಎಲ್ಲಾ ಪೂಜೆ- ಅಭಿಷೇಕಗಳು ಎಂದಿನಂತೆಯೇ ಇದ್ದು ಬೆಳಗ್ಗೆ ೧೧ ಗಂಟೆಯೋಳಗೆ ಪೂಜಾ ಕೈಂಕರ್ಯ ಮುಗಿದು, ಚಾವಣಿ ಕೆಲಸಕ್ಕಾಗಿ ಗರ್ಭ ಗುಡಿ ಮುಚ್ಚಲಾಗುತ್ತದೆ. ಆದರೆ ಕನಕನ ಕಿಂಡಿಯಿಂದ ಭಕ್ತರು ಕೃಷ್ಣ ದೇವರನ್ನು ಸದಾ ನೋಡಬಹುದು. ಸಂಜೆ ಮತ್ತೆ ೫ ಗಂಟೆಯಿಂದ ರಾತ್ರಿ ೯ ವರೆಗೆ ಗರ್ಭ ಗುಡಿ ತೆರೆದಿದ್ದು ಭಕ್ತರ ದರ್ಶನಕ್ಕೆ ಮುಕ್ತವಾಗಿದೆ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದರು. ಈ ಯೋಜನೆಗೆ ಸುವರ್ಣ ಹಾಗೂ ನಗದು ರೂಪದಲ್ಲಿ ದೇಣಿಗೆ ಸಲ್ಲಿಸಿದ ಭಕ್ತರಿಗೆ ಶ್ರೀ ಕೃಷ್ಣ ನ ದೇವಸ್ಥಾನದ ಗರ್ಭಗುಡಿಯ ಮೇಲ್ಚಾವಣಿಗೆ ಹೊದಿಸಿದ ತಾಮ್ರದ ಅಚ್ಚು ಪ್ರಸಾದ ರೂಪದಲ್ಲಿ ಸಿಗಲಿದೆ.