ಉಡುಪಿ, ಮಾ 14 (MSP): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ. ಕ್ಷೇತ್ರದ ಹತ್ತು ಶೇಕಡದಷ್ಟು ಕಾಂಗ್ರೆಸಿಗರು ಕೂಡಾ ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಎಐಸಿಸಿ ಸದಸ್ಯ ಅಮೃತ್ ಶೆಣೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸೀಟು ಹಂಚಿಕೆ ಅಂತಿಮಗೊಂಡಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಈ ವಿಚಾರ ಅಧಿಕೃತವಾಗಿ ಹೊರಬೀಳುತ್ತಿದ್ದಂತೆ ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗರು ಹೈಕಮಾಂಡ್ ನಿರ್ಧಾರಕ್ಕೆ ಸಿಡಿಮಿಡಿಗೊಂಡಿದ್ಧಾರೆ.
ಈ ಬಗ್ಗೆ ದಾಯ್ಜಿ ವಲ್ಡ್ ನೊಂದಿಗೆ ಮಾತನಾಡಿದ ಅಮೃತ್ ಶೆಣೈ, " ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ವಿರುದ್ದ ಪಕ್ಷದ ಒಳಗೆ ತೀವ್ರ ಪ್ರತಿಭಟನೆ ಸಲ್ಲಿಸುತ್ತೇನೆ ಒಂದು ವೇಳೆ ಪಕ್ಷದ ನಿರ್ಧಾರ ಬದಲಾಗದಿದ್ದರೆ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾನು ಎಐಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದು ಪಕ್ಷದ ನಿಲುವು ಬದಲಾಗದೇ ಇದ್ದರೆ, ನಾನು ಪಕ್ಷೇತರನಾಗಿ ನಾಮ ಪತ್ರ ಸಲ್ಲಿಸುವ ಬಗ್ಗೆಯೂ ಚಿಂತಿಸುತ್ತೇನೆ. ನನಗೆ ಗೆಲುವು ಅಥವಾ ಸೋಲುವುದು ಮುಖ್ಯವಲ್ಲ. ಸಿದ್ದಾಂತದ ಜತೆ ರಾಜಿ ಆಗದಂತೆ ಬದುಕುವುದು ಮುಖ್ಯ" ಎಂದು ಹೇಳಿದ್ದಾರೆ
ನನ್ನ ನಿರ್ಧಾರವನ್ನು ಹಲವು ಕಾಂಗ್ರೆಸ್ ಕಾರ್ಯಕರ್ತರು ಒಪ್ಪದಿರಬಹುದು. ನನ್ನ ನಿರ್ಧಾರ ಒಪ್ಪಲೇಬೇಕೆಂದು ಒತ್ತಾಯ ಇಲ್ಲ. ಈ ಹಿಂದೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಚಿರಋಣಿ. ಬಿಜೆಪಿಯ ಅನ್ಯಾಯವನ್ನು ಮಾತ್ರ ಪ್ರತಿಭಟಿಸಿ ಕಾಂಗ್ರೆಸ್ ಅನ್ಯಾಯಗಳನ್ನು ನುಂಗಿ ಬದುಕಿದರೆ ನನಗೆ ನಾನು ಆತ್ಮ ದ್ರೋಹ ಮಾಡಿದಂತೆ ಆಗುತ್ತದೆ. ಈ ಸನ್ನಿವೇಶ ಉಸಿರುಗಟ್ಟಿದಂತೆ ಇದೆ. ಕಾಂಗ್ರೆಸ್ ನ ಇಂದಿನ ಹೈಕಮಾಂಡ್ ನಿರ್ಧಾರ ಯಾಕೋ ಗಂಟಲಿನ ಕೆಳಗೆ ಇಳಿಯುತ್ತಿಲ್ಲ ಎಂದರು.
ಜೆಡಿಎಸ್ ಗೆ ಕ್ಷೇತ್ರವನ್ನು ಬಿಟ್ಟುಕೊಡುವ ಮುಂಚೆ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾ ಕಾಂಗ್ರೆಸ್ ನೊಂದಿಗೆ ಚರ್ಚಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಕೆಪಿಸಿಸಿ ತರಬೇತಿಯೊಂದಿಗೆ ನಿರತನಾಗಿದ್ದರಿಂದ ನನಗೆ ಈ ಬಗ್ಗೆ ಯಾವುದೇ ವಿಚಾರ ತಿಳಿದಿಲ್ಲ " ಎಂದು ಅಮೃತ್ ಹೇಳಿದರು.