ಕಾರ್ಕಳ,ಮಾ 14 (MSP): ಉಡುಪಿ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಮರಳು ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದ ಪರಿಣಾಮ ಪ್ರಸಕ್ತ ಕಾಲಘಟ್ಟದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಾರ್ಕಳ ಲಾರಿ ಚಾಲಕ-ಮಾಲಕರು ಮತ್ತು ಮರಳು ಪರವಾನಿದಾರರ ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ಹೆಗ್ಡೆ ಕಾಂತರಗೋಳಿ ಘಂಟಾಘೋಷವಾಗಿ ಹೇಳಿದ್ದಾರೆ.
ನಗರದ ಅನಂತಶಯನ ದೇವಳ ಸಮೀಪದ ಹೊಟೇಲ್ ಪ್ರಕಾಶ್ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮರಳು ನೀತಿ ಸರಳೀಕರಣ ಮಾಡಬೇಕೆಂದು ಆಗ್ರಹಿಸಿ ಸಂಘ ಹಲವು ರೀತಿಯಲ್ಲಿ ಹೋರಾಟ, ಪ್ರತಿಭಟನೆಗಳನ್ನು ನಡೆಸಿದೆ. ನಮಗೆ ಸಮರ್ಪಕ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದರು. ಈ ನಡುವೆ ಮಂಗಳೂರಿನಲ್ಲಿ ಸಾಮಾನ್ಯ ಮಟ್ಟದಲ್ಲಿ ಸಮಸ್ಯೆ ಸರಿಪಡಿಸಲು ಅಲ್ಲಿನ ಜಿಲ್ಲಾಧಿಕಾರಿಗಳು ಸಫಲರಾಗಿದ್ದರೆ. ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದೇವೆ. ಇದರಿಂದಾಗಿ ಕೂಲಿಕಾರ್ಮಿಕರು ಕೆಲಸವಿಲ್ಲದೆ ಒಪ್ಪೊತ್ತು ಕೂಳಿಗಾಗಿ ಪರದಾಡುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೇ ಇದರಪರಿಣಾಮ ಎನ್ನುವಂತೆ ಸಣ್ಣ ಗೂಡಂಗಡಿ ಹಾಗೂ ಹೊಟೇಲ್ಗಳಲ್ಲೂ ವ್ಯಾಪಾರವಿಲ್ಲದೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೆಷ್ಟೋ ಸಾಲ ಮಾಡಿ ವಾಹನಗಳನ್ನು ಖರೀದಿಸಿದ ಲಾರಿ ಮಾಲಿಕರು ಸಾಲ ಮರುಪಾವತಿಸಲಾಗದೆ ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಯಾರಲ್ಲೂ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ ಎಂದಾದರೆ, ನಮಗೆ ಈ ಭೂಮಿಯಲ್ಲಿ ಬದುಕುವ ಹಕ್ಕಿಲ್ಲವೇ ? ಎಂದು ಪ್ರಶ್ನಿಸಿದರು.
ಪರವಾನಿಗೆ ಇದ್ದರೂ ಗಡಿಮೀರಿ ಪೊಲೀಸ್ ದೌರ್ಜನ್ಯ
ಸಾಮಾನ್ಯ ಜನತೆಗೆ ಮರಳು ಸಿಗದೆ ಸಂಕಷ್ಟಕ್ಕೀಡಾದ ಈ ಪರಿಸ್ಥಿತಿಯನ್ನು ಸ್ವತಃ ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದರೂ ಈ ಪೊಲೀಸ್ ಇಲಾಖೆ ವಿನಾ ಕಾರಣ ತೊಂದರೆ ಕೊಡುತ್ತಿದೆ. ಇತ್ತೀಚೆಗೆ ಮಂಗಳೂರಿನಿಂದ ಪರವಾನಿಗೆ ಪಡೆದು ಬೆಳುವಾಯಿಗೆ ಬಂದಿದ್ದ ಲಾರಿಗಳನ್ನು ತಡೆದು, ಅದರ ಚಾಲಕರಿಗೆ ಕಾರ್ಕಳ ಎಎಸ್ಪಿ ಹಲ್ಲೆ ನಡೆಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಕಾರ್ಕಳ ಲಾರಿ ಚಾಲಕ-ಮಾಲಕರು ಮತ್ತು ಮರಳು ಪರವಾನಿದಾರರ ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ಹೆಗ್ಡೆ ತಿಳಿಸಿದ್ದಾರೆ. ಮರಳು ಸಾಗಾಟದ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ತಮ್ಮ ಅಧಿಕಾರದ ವ್ಯಾಪ್ತಿಯ ಗಡಿ ದಾಟಿ ದೌರ್ಜನ್ಯ ನಡೆಸುತ್ತಿರುವು ಪೊಲೀಸ್ ಇಲಾಖೆಯ ಕಾರ್ಯವೈಖರಿ ನೋವು ತಂದಿದೆ. ಇದೇ ವಿಚಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಮತ್ತು ಸರಕಾರದ ವೈಫಲ್ಯವನ್ನು ಮರೆಮಾಚಿ ನಮ್ಮಂತಹವರನ್ನು ಮೋಸಗಾರರು, ಕಳ್ಳರೆಂದು ಕರೆಯುವುದು ನ್ಯಾಯ ಸಮ್ಮತವಲ್ಲದಾಗಿದೆ ಎಂದು ವಿವರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆರ್ಮುಂಡೆ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಹೆಗ್ಡೆ ಕಡ್ತಲ, ಸಂಜೀವ ಕೆರ್ವಾಶೆ ಮುಂತಾದವರು ಉಪಸ್ಥಿತರಿದ್ದರು.