ಮಂಗಳೂರು, ಮಾ 14(SM): ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಮೇರೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಮಂಗಳೂರಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ. ಕೆಲವು ದಿನಗಳಿಂದ ಬಿಜೆಪಿ ಕಾರ್ಯಕರ್ತರು ದೇಶದ ಸೈನಿಕರ ಹೆಸರನ್ನು ಬಳಕೆ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಈ ನಡುವೆ ಸಂಸದ ನಳಿನ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಮತ್ತಷ್ಟು ಪುಷ್ಠಿ ನೀಡಿದೆ.
‘ನನ್ನ ಒಂದು ಓಟಿನಿಂದ ಯಾವ ಬದಲಾವಣೆಯಾಗುತ್ತೆ ಎನ್ನುವ ಖಿನ್ನತೆಯ ಮಾತು ಬೇಡ. ವಾಜಪೇಯಿ 1 ಓಟಿನಿಂದ ಸೋತರು. ದೇಶ 10 ವರ್ಷಗಳ ಕಾಲ ಇನ್ನಿಲ್ಲದಂತೆ ಲೂಟಿಯಾಯಿತು ಎನ್ನುವುದು ನೆನಪಿರಲಿ. ನಿಮ್ಮ ಒಂದು ಓಟ್ ಸೈನಿಕರಿಗೆ ಶ್ರೀರಕ್ಷೆಯಾಗಬಹುದು. ಮೋದಿ ಮತ್ತೊಮ್ಮೆ’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಂಸದ ನಳಿನ್ ಟ್ವೀಟ್ ಮಾಡಿದ್ದಾರೆ.
ಇದೀಗ ಇದರ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್ ಸಂಸದ ನಳಿನ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.