ಕುಂದಾಪುರ, ಮಾ 15 (MSP): ಇಲ್ಲಿನ ತಲ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ಎರಡನೇ ವಾರ್ಡ್ ದಲಿತ ಕೇರಿ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಸಂಕಷ್ಟದ ಕುರಿತು ದಾಯ್ಜಿವಲ್ಡ್ ನಲ್ಲಿ ಸುದ್ದಿ ಪ್ರಕಟವಾದ 24 ಗಂಟೆಯಲ್ಲಿ ಪಂಚಾಯತ್ ನಿಯೋಗ ಸ್ಥಳಕ್ಕೆ ದೌಡಾಯಿಸಿದೆ.
24 ಗಂಟೆಯಲ್ಲಿ ಪಂಚಾಯತ್ ಪಿಡಿಓ ಹಾಗೂ ಕಾರ್ಯದರ್ಶಿಯನ್ನೊಳಗೊಂಡು ನಿಯೋಗ ಸ್ಥಳಕ್ಕೆ ತೆರಳಿ ದಲಿತ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದೆ. ಈ ವೇಳೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಕುಟುಂಬಗಳು ವಾರ್ಡ್ ಸದಸ್ಯರು ಹಾಗೂ ಅಧ್ಯಕ್ಷರನ್ನು ಮೊದಲು ಸ್ಥಳಕ್ಕೆ ಕರೆಸಿ ಎಂದು ಪಟ್ಟು ಹಿಡಿದರು.
ಪಿಡಿಓ ಮಾಧ್ಯಮಗಳಿಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ. ಪಂಚಾಯತ್ ಬಿಡುವ ನೀರನ್ನು ತೋಟಕ್ಕೆ ಹಾಗೂ ಬಾವಿಗಳಿಗೆ ಬಿಟ್ಟುಕೊಳ್ಳುತ್ತಿದ್ದಾರೆ ಎಂದು ನಮ್ಮ ಮೇಲೆ ವೃಥಾ ಆರೋಪ ಮಾಡಿದ್ದಾರೆ. ತೋಟಕ್ಕೆ ನೀರು ಬಿಟ್ಟಿರುವುದುನ್ನು ಮೊದಲು ತೋರಿಸಿ. ಕುಡಿಯಲು ನೀರಿಲ್ಲದೆ ಒದ್ದಾಡುತ್ತಿರುವ ನಾವುಗಳು ತೋಟಕ್ಕೆ ನೀರು ಬಿಡುವುದಾದರೂ ಹೇಗೆ ಎಂದು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.
ದಲಿತರು ಕುಡಿಯಲು ನೀರು ಕೇಳೋದು ತಪ್ಪೇ. ದಲಿತಕೇರಿಯನ್ನು ಪಂಚಾಯತ್ ನಿರ್ಲಕ್ಷ್ಯ ಮಾಡುತ್ತಿದೆ. ನೀರಿನ ಸಮಸ್ಯೆ ಇಲ್ಲ ಎಂದು ಹೇಳುವ ಪಿಡಿಓ ಒಂದು ದಿನ ಈ ಕೇರಿಯಲ್ಲಿ ವಾಸ ಮಾಡಲಿ. ಆಮೇಲೆ ನಮ್ಮ ಕಷ್ಟ ಅವರಿಗೂ ಅರಿವಾಗುತ್ತೆ. ಪಂಚಾಯತ್ಗೆ ಹಣ ಕೊಟ್ಟು ಅಳವಡಿಸಿಕೊಂಡ ನಳ್ಳಿಯಲ್ಲಿ ನೀರು ಬರುತ್ತಿಲ್ಲವೆಂಬ ಕಾರಣಕ್ಕೆ ಒಂದು ನಳ್ಳಿಯನ್ನು ನಾವೇ ತಗ್ಗುಪ್ರದೇಶಕ್ಕೆ ಹಾಕಿಸಿಕೊಂಡಿದ್ದೇವೆ. ಇದೇ ನಳ್ಳಿಯನ್ನು ಸದ್ಯಕ್ಕೆ ಈ ಕೇರಿಯ ಎಲ್ಲಾ ಜನರು ಬಳಸಿಕೊಳ್ಳುತ್ತಿದ್ದಾರೆ. ನೀರು ಸರಿಯಾಗಿ ಕೊಟ್ಟಿದ್ದರೆ ನಾವು ಹೀಗೆ ಮಾಡುತ್ತಿರಲಿಲ್ಲ.
ಮಾಧ್ಯಮದವರು ಬರುವ ಮೊದಲು ನಿಮ್ಮ ಮನೆಯ ನಳ್ಳಿಯನ್ನು ತೆರವುಗೊಳಿಸಿ ಎಂದಿರುವ ಪಿಡಿಓ ಮಾಧ್ಯಮದವರು ಬಂದ ಬಳಿಕೆ ಅಕ್ರಮ ನಳ್ಳಿ ತೆರವು ಮಾಡಿ ಎಂದು ವರಸೆ ಬದಲಾಯಿಸಿದ್ದಾರೆ. ನಳ್ಳಿ ಅಕ್ರಮವೆಂದು ಹೇಳುವ ಪಂಚಾಯತ್ ಪಿಡಿಓ ಮೊದಲು ಈ ಕೇರಿಗೆ ಸರಿಯಾಗಿ ನೀರಿನ ಪೂರೈಕೆ ಮಾಡಲಿ. ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡುವುದು ಸರಿಯಲ್ಲ ಎಂದು ದಲಿತಕೇರಿಯ ನಿವಾಸಿಗಳು ಗುಡುಗಿದ್ದಾರೆ.
ಇನ್ನು ಸ್ಥಳಕ್ಕೆ ತೆರಳುವ ಮೊದಲು ನಳ್ಳಿಯನ್ನು ತೆರವುಗೊಳಿಸಲು ಮುಂದಾಗಿದ್ದ ಪಿಡಿಓ ಮಣ್ಣನ್ನು ಅಗೆಸಿದ್ದರು. ಸ್ಥಳಕ್ಕೆ ಬಂದ ನಂತರ ನಳ್ಳಿ ತೆರವುಗೊಳಿಸುವುದನ್ನು ಕೈಬಿಟ್ಟು ಅಕ್ರಮ ನಳ್ಳಿಯನ್ನು ತೆಗೆಯಿರಿ ಎಂದು ಸ್ಥಳೀಯರಿಗೆ ಸೂಚನೆ ನೀಡಿದರು. ಸ್ಥಳೀಯರು ನಮಗೆ ಸರಿಯಾಗಿ ನೀರು ಪೂರೈಕೆ ಮಾಡಿ ಆ ಬಳಿಕ ನಾವೇ ಇದನ್ನು ತೆರವುಗೊಳಿಸುತ್ತೇವೆ ಎಂದರು. ಆ ಬಳಿಕ ಪಿಡಿಓ ಹಾಗೂ ಸ್ಥಳೀಯ ನಿವಾಸಿಗಳ ಮಧ್ಯೆ ವಾಗ್ವಾದ ಉಂಟಾದ ಕಾರಣ ನಿಯೋಗ ಅಲ್ಲಿಂದ ತೆರಳಿತು.
ಒಟ್ಟಿನಲ್ಲಿ ಪಂಚಾಯತ್ ಆಡಳಿತ, ಅಧಿಕಾರಿಗಳು, ವಾರ್ಡ್ ಸದಸ್ಯರು ಸೇರಿ ಸ್ಥಳಕ್ಕೆ ಬಂದು ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರಗಳನ್ನು ಕೈಗೊಂಡಿದ್ದರೆ ಈ ಸಮಸ್ಯೆಗೊಂದು ತಾತ್ಕಾಲಿಕ ಮುಕ್ತಿ ದೊರಕುತಿತ್ತು. ಇದೀಗ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಪಂಚಾಯತ್ ಹೇಗೆ ಈ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.