ಉಡುಪಿ, ಮಾ 15(SM): ಕುಂದಾಪುರದ ಕೆದೂರು ಬೇಳೂರು ಸ್ಪೂರ್ತಿಧಾಮದಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಸ್ಪೂರ್ತಿಧಾಮದ ಮುಖ್ಯಸ್ಥ ಕೇಶವ ಕೋಟೇಶ್ವರ (50) ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಉಡುಪಿ ಮಹಿಳಾ ಠಾಣೆಯ ಪೊಲೀಸರು ಪೋಕ್ಸೊ ಕಾಯಿದೆಯಡಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೋರ್ವ ಆರೋಪಿ ಕುಂದಾಪುರ ಕೊರ್ಗಿಯ ಹನುಮಂತ(28) ಎಂದು ಗುರುತಿಸಲಾಗಿದೆ. ಕೇಂದ್ರದಲ್ಲಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರು ಉಡುಪಿ ಮಹಿಳಾ ಠಾಣೆಗೆ ನೀಡಿದ ದೂರಿಂತೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ಇವರಲ್ಲಿ ಹನುಮಂತ ವಿರುದ್ಧ ಎರಡು ಹಾಗೂ ಕೇಶವ ಕೋಟೇಶ್ವರ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಇವುಗಳ ಪೈಕಿ ಒಂದು ಪ್ರಕರಣದಲ್ಲಿ ಇವರಿಬ್ಬರು ಆರೋಪಿಗಳಾಗಿದ್ದಾರೆ. ಪೊಲೀಸರು ಗುರುವಾರ ನಸುಕಿನ ವೇಳೆ ಸಂಸ್ಥೆಗೆ ದಾಳಿ ನಡೆಸಿ ಕೇಶವ ಕೋಟೇಶ್ವರನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದರು. ಅದೇ ದಿನ ಹನುಮಂತನನ್ನು ಕೂಡ ಪೊಲೀಸರು ಬಂಧಿಸಿದ್ದರು. ಬಂಧಿತರಿಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.