ಮಂಗಳೂರು, ಮಾ 16 (MSP): ಅರಬ್ಬೀ ಸಮುದ್ರದಲ್ಲಿ ಸಂಚರಿಸುತ್ತಿದ್ದ "ಸಾಗರ ಸಂಪದ " ಹೆಸರಿನ ಸಂಶೋಧನಾ ನೌಕೆಯೊಂದರಲ್ಲಿ ಮಾ.15ರ ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಕೋಸ್ಟ್ಗಾರ್ಡ್ ನಡೆಸಿದ ತುರ್ತು ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ.
ಘಟನೆ ನಡೆದ ಸಂದರ್ಭ ಸಂಶೋಧನಾ ನೌಕೆಯಲ್ಲಿ 16 ವಿಜ್ಞಾನಿಗಳು ಒಳಗೊಂಡಂತೆ 46 ಮಂದಿ ಸಿಬ್ಬಂದಿಗಳಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಪಣಂಬೂರು ಸಮುದ್ರ ತೀರದಿಂದ ಸುಮಾರು 35 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ಸಂಭವಿಸಿದೆ.
ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ನೌಕೆಯಲ್ಲಿ ಅಗ್ನಿ ಅವಘಡ ನಡೆದಿದ್ದು,ಈ ಬಗ್ಗೆ ತಕ್ಷಣ ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿತ್ತು. ತಕ್ಷಣ ಕಾರ್ಯಾಚರಣೆಗೆ ಇಳಿದ ಕೋಸ್ಟ್ ಗಾರ್ಡ್ ಐಸಿಜಿಎಸ್ ಸುಜಯ್ ಮತ್ತು ವಿಕ್ರಮ್ ನೌಕೆಯನ್ನು "ಸಾಗರ ಸಂಪದ" ನೌಕೆ ಬಳಿ ಕಳುಹಿಸಿಕೊಟ್ಟಿದೆ. ಈ ಎರಡು ನೌಕೆಗಳು ತಡರಾತ್ರಿ 12.20ಕ್ಕೆ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿ ರಾತ್ರಿ 1.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದಿದೆ.
ಅಗ್ನಿ ಅವಘಡದಿಂದ ಸಂಶೋಧನಾ ನೌಕೆಯ ಹಲವು ಭಾಗಕ್ಕೆ ಹಾನಿಯಾಗಿದ್ದು ಈ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹ್ನ ನವಮಂಗಳೂರು ಬಂದರಿಗೆ ಆಗಮಿಸಲಿದೆ. ನೌಕೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.